ಸುಬ್ರಮಣ್ಯ, ಅ22 : ಮೂಢನಂಬಿಕೆ ನಿಷೇಧ ಕಾಯ್ದೆಯಡಿಯಲ್ಲಿ ಮಡೆ ಸ್ನಾನವನ್ನು ಬ್ಯಾನ್ ಮಾಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ಕರಾವಳಿಯ ಬುಡಕಟ್ಟು ಮಲೆಕುಡಿಯ ಸಮುದಾಯ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಮುಜುರಾಯಿ ಆಡಳಿತಕ್ಕೆ ಒಳಪಟ್ಟಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿಯನ್ನು ಬಹಿಷ್ಕರಿಸುವ ಬೆದರಿಕೆಯನ್ನು ಮಲೆಕುಡಿಯರು ಹಾಕಿದ್ದಾರೆ. ಚಂಪಾ ಷಷ್ಠಿಯಲ್ಲಿ ಮಲೆಕುಡಿಯರ ಪಾತ್ರ ಪ್ರಮುಖವಾಗಿದ್ದು ರಥ ಕಟ್ಟುವುದೂ ಸೇರಿದಂತೆ ಹಲವು ಆಚರಣೆಗಳನ್ನು ತಲೆತಲಾಂತರದಿಂದ ಇದೇ ಸಮುದಾಯದವರು ನಡೆಸಿಕೊಂಡು ಬಂದಿದ್ದಾರೆ. ನವೆಂಬರ್ 24ರಂದು ಸುಬ್ರಮಣ್ಯದಲ್ಲಿ ಚಂಪಾ ಷಷ್ಠಿ ನಡೆಯಲಿದೆ. ಒಂದೊಮ್ಮೆ ರಾಜ್ಯ ಸರಕಾರ ಮಡೆ ಸ್ನಾನದ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳದಿದ್ದರೆ ಚಂಪಾ ಷಷ್ಠಿ ಬಹಿಷ್ಕರಿಸುವುದಾಗಿ ಮಲೆಕುಡಿಯರ ಪ್ರಭಾವಿ ನಾಯಕ ರಾಜ್ಯ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಭಾಸ್ಕರ ಬೆಂಡೋಡಿ ಮುಜುರಾಯಿ ಸಚಿವರಿಗೆ ಪತ್ರ ಬರೆದಿದ್ದಾರೆ. 'ಮಡೆ ಸ್ನಾನ ಸಂಪ್ರದಾಯವಾಗಿದ್ದು ಮುಂದುವರಿಯಲೇಬೇಕು. ಅದನ್ನು ನಿಷೇಧ ಮಾಡುವ ರಾಜ್ಯ ಸರಕಾರದ ನಿರ್ಧಾರವನ್ನು ಕಟುವಾಗಿ ವಿರೋಧಿಸುತ್ತೇವೆ' ಎಂದು ಭಾಸ್ಕರ್ ಬೆಂಡೋಡಿ ಹೇಳಿದ್ದಾರೆ. ಈ ಪ್ರಕರಣವಿನ್ನೂ ನ್ಯಾಯಾಲಯದಲ್ಲಿದೆ. ಹೀಗಿರುವಾಗ ರಾಜ್ಯ ಸರಕಾರ ಇದನ್ನು ಹೇಗೆ ನಿಷೇಧ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.