ಉಪ್ಪಿನಂಗಡಿ, ಏ 17 (DaijiworldNews/DB): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿಘಾಟಿಯಲ್ಲಿ ಒಂಟಿ ಸಲಗವೊಂದು ಪಾದಚಾರಿಯೊಬ್ಬರನ್ನು ಸೊಂಡಿಲಿನಿಂದ ಎತ್ತಿ ಎಸೆದು ಗಾಯಗೊಳಿಸಿದೆ. ಕಾರಿನ ಮೇಲೆ ಇದೇ ಸಲಗ ನಡೆಸಿದ ದಾಳಿಯಲ್ಲಿ ದಂಪತಿ ಪಾರಾದ ಘಟನೆ ನಡೆದಿದೆ.
ಶಿರಾಡಿಘಾಟಿಯಲ್ಲಿ ಒಂಟಿ ಸಲಗವು ಹಗಲು ಹೊತ್ತಿನಲ್ಲೇ ಸಂಚಾರ ನಡೆಸುತ್ತಿದ್ದು, ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಬಂದು ಅವರನ್ನು ಸೊಂಡಿಲಿನಿಂದ ಎತ್ತಿ ದೂರಕ್ಕೆ ಎಸೆದಿದೆ. ಇದರಿಂದ ಗಾಯಗೊಂಡ ಅವರನ್ನು ಸಕಲೇಶಪುರ ಆಸ್ಪತ್ರೆಗೆ ದಾಖಳಿಸಲಾಯಿತು. ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅದೇ ದಿನ ಮಧ್ಯಾಹ್ನ ವೇಳೆಗೆ ಆ ಮಾರ್ಗವಾಗಿ ಕಾರಿನಲ್ಲಿ ಸಂಚರಿಸುತ್ತಿದ್ದ ಬೆಂಗಳೂರು ಮೂಲದ ನವದಂಪತಿಗೂ ಆನೆ ಎದುರಾಗಿದೆ. ದಂಪತಿ ಸಂಚರಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿದೆ. ಆದರೆ ದಂಪತಿ ಅದೃಷ್ಟವಶಾತ್ ಪಾರಾಗಿದ್ದಾರೆ. ಸದ್ಯ ಅರಣ್ಯ ಇಲಖೆ ಮತ್ತು ಪೊಲೀಸ್ ಇಲಾಖೆ ಸಿಬಂದಿ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿ ಆನೆಯನ್ನು ಕಾಡಿಗೆ ಅಟ್ಟಿದ್ದಾರೆ. ಆದರೆ ಒಂಟಿ ಸಲಗನ ಕಾಟದಿಂದ ಹೈರಾಣಾಗಿರುವ ಸ್ಥಳೀಯರು, ಶಿರಾಡಿಘಾಟಿ ಮಾರ್ಗವಾಗಿ ಸಂಚರಿಸುತ್ತಿರುವವರಿಗೆ ಆತಂಕ ಹೆಚ್ಚಿದೆ.