ಮಂಗಳೂರು, ಏ 16 (DaijiworldNews/HR): ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಕೆಡಹಲು ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದ ಆರಂಭಗೊಂಡ ಹಳೆಯ ಮಾರ್ಕೆಟ್ನ ಬಾಕಿ ಇರುವ ಕಟ್ಟಡವನ್ನು ಕೆಡಹುವ ಕಾರ್ಯಾಚರಣೆ ಇಂದು ನಡೆಯಿತು.
ಕಟ್ಟಡ ತ್ಯಾಜ್ಯದಿಂದ ಕಲ್ಲು, ಕಬ್ಬಿಣ ಸಹಿತ ಪ್ರತ್ಯೇಕಿಸುವ ಕೆಲಸ ನಡೆದಿದ್ದು, ಆ ತ್ಯಾಜ್ಯವನ್ನು ಈಗಿರುವ ಸ್ಥಳದಿಂದ ವಿಲೇವಾರಿ ಮಾಡಲಾಗುತ್ತದೆ. ಈ ಪ್ರಕ್ರಿಯೆ ನಡೆಸುವುದು ಗುತ್ತಿಗೆದಾರ ಜವಾಬ್ದಾರಿಯಾಗಲಿದೆ.
ಇನ್ನು ಹಳೆಯ ಸೆಂಟ್ರಲ್ ಮಾರ್ಕೆಟ್ ಕೆಡಹುವ ಕಾರ್ಯಾಚರಣೆ ಪೂರ್ಣವಾದ ಬಳಿಕ ಅದೇ ಸ್ಥಳದಲ್ಲಿ ಹೊಸ ಮಾರುಕಟ್ಟೆಯನ್ನು ಸ್ಮಾರ್ಟಸಿಟಿ ಯೋಜನೆಯಡಿ ನಿರ್ಮಿಸಲಿದ್ದು, ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್ ಕೂಡ ಅಂತಿಮವಾಗಿದೆ. ಸೆಂಟ್ರಲ್ ಮಾರ್ಕೆಟ್ ಕಟ್ಟಡಕ್ಕೆ (ತರಕಾರಿ/ ಹಣ್ಣು ಹಂಪಲು ಮತ್ತು ಮೀನು/ ಮಾಂಸದ ಮಾರ್ಕೆಟ್ನ 2 ಕಟ್ಟಡಗಳು) ಸುಮಾರು 62 ವರ್ಷಗಳ ಇತಿಹಾಸವಿದೆ.
2020 ಎ. 2ರಂದು ಮಾರ್ಕೆಟ್ನಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಿಷೇಧಿಸಿ, ಶಿಥಿಲವಾದ ಹಳೆಯ ಕಟ್ಟಡವನ್ನು ಕೆಡಹಲು ನಿರ್ಧರಿಸಿ ಎ. 4ರಂದು ಸಾರ್ವಜನಿಕ ಪ್ರಕಟನೆ ಹೊರಡಿಸಿತ್ತು. ಕೆಡಹುವ ಕಾಮಗಾರಿಯನ್ನೂ ಆರಂಭಿಸಲಾಗಿತ್ತು.
ಇನ್ನು ಇದನ್ನು ಆಕ್ಷೇಪಿಸಿ ಕೆಲವು ಮಂದಿ ವ್ಯಾಪಾರಿಗಳು ಹೈಕೋರ್ಟ್ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ 29ರಂದು ಕಾಮಗಾರಿ ನಿಲ್ಲಿಸಲಾಗಿದ್ದು, ಇದೀಗ ನ್ಯಾಯಾಲಯ ತಡೆಯಾಜ್ಞೆ ತೆರವು ಮಾಡಿದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.