ಉಡುಪಿ, ಏ 16 (DaijiworldNews/HR): ಯೇಸುವಿನ ಪುನರುತ್ಥಾನ ಪ್ರಸ್ತುತ ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಅಸೂಯೆ, ಕ್ರೋಧ ಹಾಗೂ ತಾರತಮ್ಯತೆಯ ಕೆಡುಕುಗಳು ನಮ್ಮಿಂದ ದೂರವಾಗಿ, ಸಕಲ ಧರ್ಮಗಳ ಜನರು ಸಹೋದರ-ಸಹೋದರಿಯರಾಗಿ ಜೀವಿಸಲು ಸಹಕಾರಿಯಾಗಲಿ ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಆಶಿಸಿದ್ದಾರೆ.
ಶಿಲುಬೆಯ ಮೇಲೆ ಮೃತಪಟ್ಟ ಯೇಸುಸ್ವಾಮಿ ಮೂರನೇ ದಿನ ಪುನರುತ್ಥಾನರಾದರು. ಮರಣವು ಅವರನ್ನು ಸೋಲಿಸಲು ಅಶಕ್ತವಾಯಿತು. ಅವರು ಮರಣದ ಮೇಲೆ ದಿಗ್ವಿಜಯವನ್ನು ಸಾಧಿಸಿದರು. ಈ ಮೂಲಕ ನಮ್ಮ ಜೀವನದ ಕಷ್ಟ, ಸಾವು, ನೋವುಗಳು ಅರ್ಥರಹಿತವಲ್ಲ, ಬದಲಾಗಿ ದೇವರು ತಮ್ಮ ಯೋಜನೆಗಳನ್ನು ನಮ್ಮಲ್ಲಿ ಕಾರ್ಯಗತಗೊಳಿಸುವ ಗಾಢ ಅರ್ಥವನ್ನು ಒಳಗೊಂಡಿವೆ. ಕ್ಷಣಕಾಲ ನಾವು ಈ ಕಷ್ಟಗಳಿಂದ ವಿಚಲಿತರಾದರೂ, ದೇವರಲ್ಲಿ ಅಚಲ ವಿಶ್ವಾಸವಿಟ್ಟು ಅವರ ಚಿತ್ತಕ್ಕೆ ಮಣಿದರೆ, ನಮ್ಮ ಜೀವನದಲ್ಲೂ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ.
ಪುನರುತ್ಥಾನವೆಂದರೆ ಸಾವು, ನೋವು, ಚಿಂತೆ, ಹಸಿವು, ನೀರಡಿಕೆಗಳಿಲ್ಲದ ಆಹ್ಲಾದಕರ ಬದುಕು. ಯೇಸುಸ್ವಾಮಿ ಪುನರುತ್ಥಾನರಾಗಿ ಆ ಬದುಕಿನ ಭರವಸೆಯನ್ನು ನಮಗೆ ನೀಡಿದ್ದಾರೆ. ಇದೇ ಸತ್ಯವನ್ನು ಸಂಬ್ರಮಿಸುತ್ತದೆ ಪುನರುತ್ಥಾನದ ಹಬ್ಬ. ಮನುಷ್ಯ ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ನಿರಾಶನಾಗಬೇಕಿಲ್ಲ, ಕಾರಣ ದೇವರೆಡೆಗೆ ತಿರುಗಿ ಅವರನ್ನು ಒಪ್ಪಿಕೊಂಡರೆ, ನಿತ್ಯಜೀವ ಅವನದಾಗುವುದು ಎಂದು ಪಾಸ್ಖ ಹಬ್ಬ ಸಾರುತ್ತದೆ.
ಈ ಪುನರುತ್ಥಾನ ಹಬ್ಬ ನಮ್ಮೆಲ್ಲರನ್ನು ಅಂಧಕಾರದಿಂದ ಬೆಳಕಿಗೆ, ಅಸತ್ಯದಿಂದ ಸತ್ಯದೆಡೆಗೆ ದಾಟಿಸಿ ನಮ್ಮನ್ನು ಮರಣ ಭಯದಿಂದ ಮುಕ್ತಗೊಳಿಸಿ ಚಿರಂಜೀವಿಯಾಗಿಸಲಿ. ಪ್ರಸ್ತುತ ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಅಸೂಯೆ, ಕ್ರೋಧ ಹಾಗೂ ತಾರತಮ್ಯತೆಯ ಕೆಡುಕುಗಳು ನಮ್ಮಿಂದ ದೂರವಾಗಿ, ಸಕಲ ಧರ್ಮಗಳ ಜನರು ಸಹೋದರ-ಸಹೋದರಿಯರಾಗಿ ಜೀವಿಸುವಂತಾಗಲಿ. ಎಲ್ಲಾ ಸಹೋದರ-ಸಹೋದರಿಯರಿಗೂ ನಾನು ಪಾಸ್ಖ ಹಬ್ಬದ ಶುಭಾಷಯಗಳನ್ನು ಕೋರುತ್ತೇನೆ. ಮೃತ್ಯುಂಜಯ ಯೇಸುಸ್ವಾಮಿ ನಿಮ್ಮನ್ನು ಸದಾ ಆಶೀರ್ವದಿಸಿ ಕಾಪಾಡಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.