ಉಡುಪಿ, ಏ 16 (DaijiworldNews/HR): ರಾಜ್ಯದಲ್ಲಿ 40% ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಅಧಿಕೃತ ಸಂಸ್ಥೆಯ ಅಧ್ಯಕ್ಷರು ಅಪಾದನೆ ಮಾಡಿದ್ದಾರೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಗಮನಕ್ಕೆ ತಂದರೂ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಸಂತೋಷ್ ಡೆತ್ ನೋಟ್ ನಲ್ಲಿ ಈಶ್ವರಪ್ಪನವರಿಗೆ ಶಿಕ್ಷೆ ಆಗಬೇಕು ಎಂದು ಬರೆದಿದ್ದಾರೆ. ಹಾಗಾಗಿ ಈಶ್ವರಪ್ಪನವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಸಂತೋಷ್ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂಬುದು ಕಾಂಗ್ರೆಸ್ ಒತ್ತಾಯ. ಹೈಕೋರ್ಟ್ ಜಸ್ಟೀಸ್ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯಬೇಕು. ಸಂತೋಷ್ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದರು.
ಇದು ಆತ್ಮಹತ್ಯೆ ಹೌದೇ ಅಲ್ಲವೇ ಎಂಬುವುದು ತನಿಖೆಯಿಂದ ತಿಳಿಯುತ್ತೆ. ಜಾರ್ಜ್ ಸಂಬಂಧಿಸಿದ ಕೇಸ್ ಮತ್ತು ಇದು ಬೇರೆ ಬೇರೆ ಕೇಸ್. ಜಾರ್ಜ್ ತಪ್ಪು ಮಾಡಿದ್ದಾರೆ ಎಂದು ಅಪಾದನೆ ಬಂದಾಗ ಅವರು ರಾಜೀನಾಮೆ ನೀಡಿದ್ದಾರೆ. ಸಿಬಿಐ ತನಿಖೆ ಕೂಡಾ ಆಯಿತು. ನಿಮ್ಮದೂ ತನಿಖೆ ಆಗಲಿ. ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಬೇಕು ಎಂದಿದ್ದಾರೆ.
ರಾಜ್ಯದಲ್ಲಿ ಧರ್ಮ ಸಂಘರ್ಷ ವಿಚಾರದ ಕುರಿತು ಮಾತನಾಡಿದ ಅವರು, ಇದನ್ನು ಯಾರೂ ಕೂಡಾ ಕಾನೂನಿನ ಮೂಲಕ ಸರಿ ಮಾಡಲು ಸಾಧ್ಯವಿಲ್ಲ. ಜನರ ಮನಸ್ಸು ಬದಲಾವಣೆ ಆಗಬೇಕು. ಹಿಂದೆ ನಾನು ಶಾಸಕ, ಸಚಿವನಾಗಿದ್ದ ನಡೆದ ಘಟನೆಗಳ ಬಗ್ಗೆ ಮಾತಾಡಿದ್ದೆ. ಇದನ್ನು ನಾವು ಹೇಳದೆ ಇನ್ನಾರು ಹೇಳುವುದು. 21 ಶತಮಾನದಲ್ಲಿ ಆದರೂ ಬದಲಾವಣೆ ಆಗಲಿ ಎಂಬ ಉದ್ದೇಶದಿಂದ ಹೇಳಿದ್ದೇನೆ ಎಂದರು.
ಇನ್ನು ಪ್ರಮೋದ್ ಮದ್ವರಾಜ್ ಬಿಜೆಪಿ ಸೇರ್ಪಡೆ ವಿಚಾರದ ಕುರಿತು ಮಾತನಾಡಿದ ಅವರು, ಈ ಕುರಿತು ನಾನು ಮಾತಾಡಿದ್ದೇನೆ. ಅವರ ಕೆಲವು ಬೇಡಿಕೆ, ಅನಿಸಿಕೆಗಳು ಕೂಡಾ ಇವೆ. ಇದನ್ನೆಲ್ಲಾ ಸರಿಪಡಿಸಿಕೊಂಡು ಮುಂದೆ ಹೋಗುತ್ತೇವೆ. ಬಿಜೆಪಿಗೆ ಹೋಗುವ ರೀತಿ ಏನೂ ಕಾಣಿಸುತಿಲ್ಲಎಂದು ಹೇಳಿದ್ದಾರೆ.