ಮಂಗಳೂರು, ಏ 16 (DaijiworldNews/HR): ಕೆ.ಎಸ್ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಪಡೆದಿಲ್ಲಾ ಎಂದಾದರೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಬರಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್, ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದರಷ್ಟೇ ಸಾಲದು. ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಹಿಂದುತ್ವದ ಹೆಸರು ಹೇಳಿ ಅಧಿಕಾರಕ್ಕೆ ಬಂದವರಿಗೆ ಹಿಂದೂ ಕಾರ್ಯಕರ್ತರನ್ನು ಬಳಸಿಕೊಂಡು ಅಧಿಕಾರ ಪಡೆಯುವುದು ಮಾತ್ರ ಗೊತ್ತಿದೆ ಹೊರತು ಹಿಂದೂಗಳಿಗಾಗಿ ಏನೂ ಮಾಡಿಲ್ಲ. ಲಂಚ, ಮಂಚ ಮತ್ತು ಹಿಂದೂ ವಿರೋಧಿ ನೀತಿಗಳು ಮಾತ್ರ ಬಿಜೆಪಿ ಅಜೆಂಡಾ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಜಾಬ್ ಪ್ರಕರಣದಲ್ಲಿ ಆರು ವಿದ್ಯಾರ್ಥಿನಿಯರನ್ನು ನಿಯಂತ್ರಿಸಲು ಆಗದವರು ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆ ಮಾಡುತ್ತಾರೆಂಬ ನಂಬಿಕೆ ಇಲ್ಲ. ಬಿಜೆಪಿ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗಾ ಕೊಲೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಅವರ ಮನೆಯವರು ಇನ್ನೂ ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ಕೊಲೆ ಅನ್ನಬೇಕೋ ಆತ್ಮಹತ್ಯೆ ಅನ್ನಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ್, ಹರ್ಷ ನಾಯಕ್, ಶಿವಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.