ಕುಂದಾಪುರ, ಏ 15 (DaijiworldNews/SM): ಕನ್ನಡ ಮನಸ್ಸುಗಳು ಜಾಗೃತವಾಗಬೇಕಾಗಿದೆ. ನಮ್ಮ ಮಗು ಯಾವ ಮಾಧ್ಯಮದಲ್ಲಾದರೂ ಕಲಿಯಲಿ, ಆದರೆ ಓದಲು ಬರೆಯಲು ಕನ್ನಡವನ್ನು ಕಲಿಸಿ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಕುಂದಾಪುರದ ಸ.ಪ.ಪೂ.ಕಾಲೇಜು ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಉಡುಪಿ ಜಿಲ್ಲಾ ಹದಿನೈದನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತಿಗಳು ಸರಸ್ವತಿ ಪುತ್ರರು. ಇಂಥಹ ಸರಸ್ವತಿ ಪುತ್ರರನ್ನು ಲಕ್ಷ್ಮೀಪುತ್ರರಾದ ಕನ್ನಡಿಗರು ಪುಸ್ತಕಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರಾದ ಪ್ರೊ. ಎ.ವಿ ನಾವಡ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತುಗಳನ್ನಾಡಿದರು. ಡಾ. ಗಾಯತ್ರಿ ನಾವಡ ಪುಸ್ತಕ ಬಿಡುಗಡೆಗೊಳಿಸಿದರು. ಸಾಹಿತಿಗಳು, ಸಂಶೋಧಕರು ಆಗಿರುವ ಡಾ.ಕಬ್ಬಿನಾಲೆ ವಸಂತ ಭರದ್ವಾಜ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.