ಕಾರ್ಕಳ, ಏ 15 (DaijiworldNews/DB): ನಾಯಿ ಮರಿಗಳನ್ನು ಬೀದಿಗೆ ತಂದು ಬಿಡುವ ಜನರ ಕೆಲಸದಿಂದ ಸೃಷ್ಟಿಯಾಗಿರುವ ಸಮಸ್ಯೆಗಳಿಂದ ಬೇಸತ್ತು ಊರೊಂದರ ನಿವಾಸಿಗಳು ದೈವ-ದೇವರುಗಳ ಮೊರೆ ಹೋಗಿದ್ದಾರೆ. ನಾಯಿ ಮರಿಗಳನ್ನು ತಂದು ಬಿಡುವವರಿಗೆ ಊರಿನ ದೇವರು ಮತ್ತು ಕಾರಣಿಕ ದೈವಗಳು ಶಿಕ್ಷೆ ನೀಡಲಿ ಎಂಬುದಾಗಿ ಬ್ಯಾನರ್ ಅಳವಡಿಸಿದ್ದಾರೆ.
ಮುಡಾರು- ಮಿಯ್ಯಾರು-ದುರ್ಗ ಗ್ರಾಮ ಪಂಚಾಯತ್ ಗಡಿ ಭಾಗ ಕಡಂಬಳ ಎಂಬಲ್ಲಿ ಅಳವಡಿಸಲಾಗಿರುವ ಈ ಬ್ಯಾನರ್ ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಬೇಡವಾದ ನಾಯಿಮರಿಗಳನ್ನು ಯಾರೋ ಅಪರಿಚಿತರು ಈ ಊರಿನಲ್ಲಿ ತಂದು ಬಿಡುತ್ತಿದ್ದಾರೆ. ಮುಗ್ದ ಜೀವಿಗಳ ಹಾವಳಿಯಿಂದ ಬೇಸತ್ತ ನಾಗರಿಕರು ಉಪಟಳ ತಡೆಯಲಾರದೆ ನಾಯಿ ಮರಿಗಳನ್ನು ತಂದು ಬಿಟ್ಟವರಿಗೆ ದೇವರು, ಕಾರಣಿಕ ದೈವಗಳೇ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿ ಬ್ಯಾನರ್ ಹಾಕಿದ್ದಾರೆ.
ಅನಾಥ ಸ್ಥಿತಿಯಲ್ಲಿ ಇರುವ ನಾಯಿಗಳು ಪರಿಸರದಲ್ಲಿ ಓಡಾಡುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿವೆ. ವಾಹನಗಳಲ್ಲಿ ಸಂಚರಿಸುವಾಗ ನಾಯಿಗಳು ಅಡ್ಡ ಬಂದು ಅಪಘಾತ ಸಂಭವಿಸಿದ್ದಲ್ಲದೆ, ಕೆಲವರು ಜೀವ ಕಳೆದುಕೊಂಡ ಘಟನೆಗಳೂ ನಡೆದಿವೆ.
ಅಲೆದಾಡುವ ಬೀದಿನಾಯಿಗಳು ಪಾದಾಚಾರಿಳನ್ನು ಬೆನ್ನಟ್ಟಿ ಓಡಿಸುವ, ಕಚ್ಚುವ ಪ್ರಸಂಗಗಳು ನಡೆಯುತ್ತಿದೆ. ಹಸಿವೆಯಿಂದ ಬಳಲುತ್ತಿರುವ ನಾಯಿಗಳು ಪಾದಚಾರಿಗಳ ಕೈಯಲ್ಲಿರುವ ಆಹಾರ ಪೊಟ್ಟಣ ಎಳೆದಾಡುವುದು, ಕಚ್ಚುವುದು ಮಾಡುತ್ತವೆ. ಇದರಿಂದ ಆತಂಕಗೊಂಡು ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಬೀದಿನಾಯಿಗಳ ಕಾರ್ಯಾಚರಣೆಗೆ ಮುಂದಾದರೆ ಪ್ರಾಣಿದಯಾ ಸಂಘದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವರ-ದೈವಗಳಿಗೆ ಮೊರೆ ಹೋಗಿ ಪ್ರಾಣಿ ದಯೆಯನ್ನು ಮೂಡಿಸಿದ್ದಾರೆ.