ಮಲ್ಪೆ,ಡಿ 28 (MSP):ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ 14 ದಿನ ಕಳೆದಿದ್ದು, ಯಾವುದೇ ಸುಳಿವು ಪತ್ತೆಯಾಗದೇ ಕುಟುಂಬಸ್ಥರು ಆತಂಕದಲ್ಲಿದ್ದು, ಸರ್ಕಾರ ಮೀನುಗಾರರ ಕುಟುಂಬಕ್ಕೆ ಸೌಜನ್ಯಕ್ಕಾದರೂ ಸಮಸ್ಯೆ ಅಲಿಸುವ ಕೆಲಸ ಮಾಡಿಲ್ಲ ಎಂದು ಮೀನು ಮಾರಾಟ ಫೆಡರೇಶನ್ ನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು , ಮಲ್ಪೆಯ ಮೀನುಗಾರರನ್ನು ಹೊತ್ತು ಅಳಸಮುದ್ರಕ್ಕೆ ತೆರಳಿದ್ದ 'ಸುವರ್ಣ ತ್ರಿಭುಜ' ಬೋಟ್ ಸಂಪರ್ಕ ಸಿಗದೆ 14 ದಿನಗಳು ಕಳೆದು ಹೋಗಿವೆ. ಕೇಂದ್ರದ ಕೋಸ್ಟಲ್ ಗಾರ್ಡ್ ತಂಡ ಕೂಡ ಹುಡುಕಾಡುವ ಕಾರ್ಯದಲ್ಲಿ ತೊಡಗಿವೆ. ಅದರೂ ಪತ್ತೆ ಕಾರ್ಯ ಯಶಸ್ವಿಯಾಗಿಲ್ಲ. ಸಾಮಾನ್ಯವಾಗಿ ಆಳಸಮುದ್ರದ ಮೀನುಗಾರಿಕೆಗೆ ತೆರಳುವ ಬೋಟ್ಗಳು ಎರಡು ವಾರ ಸಮುದ್ರದಲ್ಲಿರುತ್ತವೆ. ಒಂದು ಬೋಟ್ ನಲ್ಲಿ ಸುಮಾರು 15 ದಿನಗಳಿಗಾಗುವಷ್ಟು ಆಹಾರದ ಸಂಗ್ರಹ ಮಾಡಲು ಸಾಧ್ಯವಾಗುತ್ತದೆ.ಡಿ. 15ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದರು. ನಂತರ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದಾರೆ. ಎಲ್ಲರ ಮೊಬೈಲ್ ಸ್ವಿಚ್ ಆಪ್ ಆಗಿದ್ದು, ಮೀನುಗಾರರ ಕುಟುಂಬಸ್ಥರು ಮಾತ್ರವಲ್ಲದೇ ಇಡೀ ಮೀನುಗಾರರ ಸಮುದಾಯವೇ ಆತಂಕದಲ್ಲಿದ್ದಾರೆ ಎಂದು ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗಿ ಬೇಟಿಯಾಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಸೌಜನ್ಯಕ್ಕಾದರೂ ಕಾಣೆಯಾದ ಮೀನುಗಾರರ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡಿಲ್ಲ. ಇತ್ತ ಕಡೆ ಗಮನ ಹರಿಸಿಲ್ಲ. ಉಡುಪಿ ಜಿಲ್ಲಾಧಿಕಾರಿಯ ಮೂಲಕ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಗ್ಗೆ ತಕ್ಷಣ ಗಮನ ಹರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಥಮ ಬಾರಿಗೆ ಮಲ್ಪೆ ಬಂದರಿನಲ್ಲಿ ಇಂತಹ ಪ್ರಕರಣ ನಡೆದಿದ್ದು, ಘಟನೆಯ ಬಳಿಕ ಮೀನುಗಾರರು ಭಯಭೀತರಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಜತೆ ಸೇರಿ ಮೀನುಗಾರರ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬೋಟಿನಲ್ಲಿದ್ದ ಮೀನುಗಾರರು ಬಹುಶಃ ಕತ್ತಲೆಯಲ್ಲಿ ಟ್ವೆಲ್ನಾಟಿಕಲ್ ಗಡಿರೇಖೆಯನ್ನು ದಾಟಿರಬಹುದು ಅಥವಾ ಹೈಜಾಕ್ ಕೂಡ ಆಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ ಅವರು, ಬೋಟ್ ಸ್ಫೋಟಗೊಂಡಿರುವ ಅಥವಾ ಮುಳುಗಿರುವ ಸಾದ್ಯತೆಗಳನ್ನು ಅಲ್ಲಗಳೆದಿದ್ದಾರೆ. ಮುಳುಗಡೆಯಾದರೆ ಕುರುಹುಗಳು ಸಿಗುತ್ತಿತ್ತು. ಆದರೆ ಅಂತಹ ಯಾವುದೇ ಸುಳಿವು ಸಿಕ್ಕಿಲ್ಲ. ಇನ್ನು ತ್ರಿಭುಜ ಸುವರ್ಣ ಬೋಟ್ ಸ್ಟೀಲ್ ದೋಣಿಯಾಗಿದ್ದು ಸ್ಪೋಟಿಸುವ ಅವಕಾಶ ತುಂಬಾ ಕಡಿಮೆ ಎಂದಿದ್ದಾರೆ.
ಮಲ್ಪೆ ತೀರಾದಲ್ಲಿ ತುರ್ತು ಸಹಾಯಕ್ಕಾಗಿ ಆ್ಯಂಬುಲೆನ್ಸ್ ನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ ಅವರು ಜತೆಗೆ ಕರಾವಳಿಯಲ್ಲಿ ತರಬೇತಿಗೊಂಡ 10 ಮಂದಿಯನ್ನ ರಕ್ಷಣಾ ಉದ್ದೇಶಕ್ಕಾಗಿ ನೇಮಕ ಮಾಡಬೇಕು. ಜಿಲ್ಲಾಡಳಿತ ಈ ರೀತಿಯ ವಿಚಾರಕ್ಕೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.