ಉಡುಪಿ, ಏ 14 (DaijiworldNews/SM): ಮಣಿಪಾಲದಿಂದ-ಪೆರಂಪಳ್ಳಿ ರಸ್ತೆ ಡಾಂಬರೀಕರಣ ಪ್ರಕ್ರಿಯೆ ಸಂಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ, ಇಷ್ಟೆಲ್ಲಾ ಮಾಡುವಾಗ ಹಲವಾರು ಕಡೆ ಅವೈಜ್ಞಾನಿಕ ಕಾಮಗಾರಿ ನಡೆದಿರುವುದು ಇದೀಗ ವಾಹನ ಸವಾರರಿಗೆ ಸಂಚಕರವಾಗಿ ಪರಿಣಮಿಸುವ ಲಕ್ಷಣಗಳು ಗೋಚರಿಸುತ್ತಿವೆ.
ರಸ್ತೆ ಸಂಚಾರ ನಿಯಮದ ಪ್ರಕಾರ ತಿರುವುಗಳಲ್ಲಿ ವಾಹನ ಚಾಲಕರ ಅನುಕೂಲಕ್ಕೆ ಸೂಚನಾ ಫಲಕವನ್ನು ಅಥವಾ ಕನ್ನಡಿಯನ್ನು ಅಳವಡಿಸಬೇಕು. ಆದರೆ ಮಣಿಪಾಲದಿಂದ - ಪೆರಂಪಳ್ಳಿ ರಸ್ತೆ ಮಧ್ಯೆ ಸಾಗುವಾಗ , ಕೇಂದ್ರ ಸರಕಾರದ ಆಹಾರ ದಾಸ್ತಾನು ಕಟ್ಟಡದ ಆವರಣ ಗೋಡೆ ಅಪಾಯವನ್ನು ಆಹ್ವಾನಿಸುತ್ತಿದೆ.
ಈ ಕಟ್ಟಡದ ಆವರಣ, ರಸ್ತೆ ಮಧ್ಯೆದಲ್ಲೇ ಬಂದರೂ ಇದರ ಕಡೆ ರಸ್ತೆ ಕಾಮಗಾರಿ ನಡೆಸಿರುವ ಕಾಂಟ್ರಾಕ್ಟರ್ಸ್ ಕ್ಯಾರೇ ಅನ್ನದೇ ಆವರಣ ಗೋಡೆಗೆ ಯಾವುದೇ ಕ್ರಮ ತೆಗೆದುಕೊಳ್ಳದೇ, ಸೂಚನಾ ಫಲಕ ಇಲ್ಲದೆ ಹಾಗೆ ಉಳಿಸಿದ್ದಾರೆ. ಇದು ವಾಹನ ಸವಾರರಿಗೆ ಮುಳುವಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.
ರಾತ್ರಿ ಸಂಚಾರ ಮಾಡುವ ವಾಹನಗಳಿಗೆ ಈ ತಿರುವಿನಲ್ಲಿ ದಾರಿ ದೀಪ ಇಲ್ಲದೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.