ಉಡುಪಿ, ಏ 14 (DaijiworldNews/SM): ಹಿಂದೂ ಧರ್ಮದ ಸುಧಾರಣೆಗೆ ಹಿಂದೂ ಕೋಡ್ ಬಿಲ್ ಜಾರಿಗೆ ತರಬೇಕು. ಸಮಾಜದಲ್ಲಿ ಜಾತಿಯ ತೊಡಕನ್ನು ನಿವಾರಿಸಲು ಶ್ರಮಿಸಿದರು. ಇವತ್ತು ಕಾಣುವ ಹಿಂದು ಧರ್ಮಕ್ಕೆ ಮೋಹನ್ ಭಾಗವತ್, ಕಲ್ಲಡ್ಕ ಪ್ರಭಾಕರ್ ಭಟ್ , ಇಂತವರು ಕಾರಣ ಅಲ್ಲ. ಅದಕ್ಕೆ ಕಾರಣ ಕಾಲ ಕಾಲಕ್ಕೆ ಸುಧಾರಣೆ ಪಡಿಸಿದ ನಾರಾಯಣಗುರು, ಸ್ವಾಮಿ ವಿವೇಕಾನಂದರು, ಕುವೆಂಪು, ರಾಜಾರಾಮ್ ಮೋಹನ್ ರಾಯರು , ಇಂತವರ ಪರಂಪರೆಯಿಂದ ಸಾಧ್ಯವಾಗಿದೆ ಎಂದು ಖ್ಯಾತ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಅವರು ಗುರುವಾರದಂದು 131ನೆಯ ಅಂಬೇಡ್ಕರ್ ಜಯಂತಿ ಪ್ರಯುಕ್ತ 'ಸಹಬಾಳ್ವೆ ಉಡುಪಿ ಮತ್ತು ಜಿಲ್ಲಾ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜೊತೆಗೂಡಿ ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಹಿಂದುತ್ವದ ಬಗ್ಗೆ ಮಾತನಾಡುವವರು, ಹಿಂದೂ ಎನಿಸಿಕೊಂಡವರು ಬಹಳ ದೊಡ್ಡ ದನಿ ಎತ್ತಿ ಹಿಂದೂ ಕೋಡ್ ಬಿಲ್ ಮತ್ತೆ ತರಬೇಕು. ಹಿಂದೂ ಧರ್ಮ ರಕ್ಷಣೆಗೆ ತಮ್ಮನ್ನ ಅರ್ಪಿಸಿಕೊಂಡವರ ಮೇಲೆ ಆ ಬಿಲ್ ನ್ನು ಜಾರಿ ತರುವಂತಹ ದೊಡ್ಡ ಜವಾಬ್ದಾರಿ ಇದೆ. ಮತ್ತೊಂದು ಧರ್ಮದ ಸುಧಾರಣೆ ತ್ರಿವಳಿ ತಲಾಖ್ ರದ್ದು , ಕಾಮನ್ ಸಿವಿಲ್ ಕೋಡ್ ಜರಿ ಮಾಡುವುದು ಪ್ರಶ್ನೆ ಅಲ್ಲ. ಅದನ್ನು ಕಾನೂನು ಜಾರಿ ಮಾಡಿ, ಅದಾಗದಿದ್ದರೆ ಬಹಿರಂಗವಾಗಿ ಒಪ್ಪಿಕೊಳ್ಳಿ.
ಅಂಬೇಡ್ಕರ್ ಕೇವಲ ದಲಿತ ಹಿತಚಿಂತಕ ಅಲ್ಲ, ಅವರೊಬ್ಬ ಉತ್ತಮ ಆರ್ಥಿಕ ತಜ್ಞ ಕೂಡ. ಡಾ ಬಿ ಆರ್ ಅಂಬೇಡ್ಕರ್ ಬಯಸಿ ಸಂವಿಧಾನ ರಚಿಸಿಲ್ಲ, ಅನಿವಾರ್ಯವಾಗಿ ಬರೆದಿದ್ದರು. ಅಂಬೇಡ್ಕರ್ ಹಿಂದೂ ಧರ್ಮದ ಸುಧಾರಣೆ ಮಾಡಿದರು. ಅವರೊಬ್ಬ ಧಾರ್ಮಿಕ ವ್ಯಕ್ತಿ . ಅದರ ಬಗ್ಗೆ ಹೆಚ್ಚು ಚರ್ಚೆ ಆಗದಿರುವುದು ವಿಷಾಧನೀಯ. ಅವರೊಬ್ಬ ದಾರ್ಶನಿಕ ರೀತಿಯಲ್ಲಿ , ಹಿಂದೂ ಧರ್ಮದ ಸುಧಾರಣೆ ಆಗದಿದ್ದರೆ ಭಾರತದಲ್ಲಿ ಪ್ರಜಾ ಪ್ರಭುತ್ವ ಬದುಕಲ್ಲ ಎಂದು ಅರಿತಿದ್ದರು. ಈಗ ಅದು ಕಣ್ಣೆದುರು ನಿಜವಾಗುತ್ತಿದೆ.
ಕೆಲವು ದಲಿತರು ವಿದ್ಯಾವಂತರಾಗಿ ಒಳ್ಳೆಯ ಸ್ಥಾನ ತಲುಪಿದಾಗ, ಆ ಸಮಾಜದ ಮೇಲೆ ಆಗುವ ಅನ್ಯಾಯಡಾ ವಿರುದ್ಧ ಪ್ರತಿಭಟಿಸಲು ಅವರು ಬರುವುದಿಲ್ಲ. ಅಂತವರಿಗೆ ಅಂಬೇಡ್ಕರ್ ಜಯಂತಿ ಆಚರಿಸುವ ಯಾವುದೇ ಅರ್ಹತೇ ಇಲ್ಲ .
ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಆದರೆ ತಿದ್ದುಪಡಿ ಮಾಡಿ ಮಾಡಿ ನಿಷ್ಕ್ರಿಯ ಮಾಡಬಹುದು. ಇದೇ ಆತಂಕಕಾರಿ ಬೆಳವಣಿಗೆ. ಸಂವಿಧಾನ ದುರ್ಬಲ ಗೊಳಿಸುವಾಗ ಪ್ರತಿಭಟನೆ ಮಾಡುವ ಅಗತ್ಯ ಇದೆ, ಎಂದು ದಿನೇಶ್ ಅಮೀನ್ ಮಟ್ಟು ಎಚ್ಚರಿಸಿದರು.