ಮಂಗಳೂರು, ಏ 14 (DaijiworldNews/DB): ಕರಾವಳಿ ಕಡಲ ತೀರಗಳಲ್ಲಿ ದುರ್ಘಟನೆಗಳನ್ನು ತಪ್ಪಿಸಲು ಹೆಚ್ಚಿನ ಸುರಕ್ಷತಾ ಮತ್ತು ಜೀವ ರಕ್ಷಕ ವ್ಯವಸ್ಥೆಗಳನ್ನು ಬಲಪಡಿಸುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರಾವಳಿ ತೀರದ ಸುಮಾರು 300 ಕಿಲೋ ಮೀಟರ್ ಉದ್ದದ ಸಮುದ್ರ ತೀರವನ್ನು ಹೊಂದಿದ್ದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಈ 3 ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟಿದೆ. ಈ ಸಮುದ್ರ ತೀರಕ್ಕೆ ಹಲವಾರು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬರುತ್ತಾರೆ. ಆದರೆ ಇಷ್ಟೊಂದು ಪ್ರವಾಸಿಗರು ಬರುವ ಈ ಸಮುದ್ರ ತೀರದಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲದ ಕಾರಣ ಹಲವಾರು ದುರ್ಘಟನೆಗಳು ನಡೆದು ಮಾನವ ಜೀವಗಳು ಹಾನಿಯಾಗಿವೆ ಎಂದು ಮಂಜುನಾಥ ಭಂಡಾರಿ ಅವರು ಹೇಳಿದ್ದಾರೆ.
ಇತ್ತೀಚೆಗೆ ಕೇರಳ ರಾಜ್ಯದ ಕೊಟ್ಟಯಂ ಜಿಲ್ಲೆಯ ಮಂಗಳ ಇಂಜಿನಿಯರಿಂಗ್ ಕಾಲೇಜಿನ ಮೂರು ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ನೀರು ಪಾಲಾಗಿ ಪ್ರಾಣ ಕಳೆದುಕೊಂಡಿರುವ ಘಟನೆಯನ್ನು ಉಲ್ಲೇಖಿಸಿದ ಅವರು, ಕರಾವಳಿ ಕಡಲ ತೀರದಲ್ಲಿ ಇಂತಹ ದುರ್ಘಟನೆಗಳು ಈ ಹಿಂದೆಯೂ ಹಲವಾರು ಬಾರಿ ನಡೆದಿದ್ದು ಲೆಕ್ಕವಿಲ್ಲದಷ್ಟು ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ.
ಆದ್ದರಿಂದ ಇಂತಹ ಅವಘಡಗಳನ್ನು ತಪ್ಪಿಸುವ ಸಲುವಾಗಿ ಪ್ರವಾಸಿಗರಿಗೆ ಸಮುದ್ರ ತೀರದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮವಹಿಸಿ ಜೀವರಕ್ಷಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಬೇಕು ಹಾಗೂ ಕಡಲ ತೀರದ ಸೂಕ್ಷ್ಮ ಪ್ರದೇಶಗಳಿಗೆ ಕಬ್ಬಿಣದ ತಡೆ ಬೇಲಿಗಳನ್ನು ಹಾಕಿ ಮುನ್ನೆಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಿ ಪೊಲೀಸ್ ಮತ್ತು ಕೋಸ್ಟ್ ಗಾರ್ಡ್ ವ್ಯವಸ್ಥೆಯ ಮೂಲಕ ಸಮುದ್ರ ತೀರದಲ್ಲಿ ಗಸ್ತು ವ್ಯವಸ್ಥೆಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.