ಉಡುಪಿ, ಏ 14 (DaijiworldNews/MS): ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿದ ರಾಜ್ಯ ಸರ್ಕಾರದ ಆದೇಶದ ವಿರುದ್ದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಆಲಿಯಾ ಅಸ್ಸಾದಿ, "ನಮ್ಮ ಭವಿಷ್ಯವನ್ನು ಹಾಳಾಗದಂತೆ ತಡೆಯಲು ನಿಮಗೆ ಇನ್ನೂ ಅವಕಾಶವಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಹಿಜಾಬ್ಗೆ ಮನವಿ ಮಾಡಿದ ಆಲಿಯಾ, 'ದ್ವಿತೀಯ ಪಿಯು ಪರೀಕ್ಷೆಗಳು ಈ ತಿಂಗಳ 22ರಿಂದ ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನಮ್ಮ ಭವಿಷ್ಯ ಹಾಳಾಗದಂತೆ ತಡೆಯಲು ನಿಮಗೆ ಇನ್ನೂ ಅವಕಾಶವಿದೆ. ಹಿಜಾಬ್ ಧರಿಸಿ ಪರೀಕ್ಷೆಗಳನ್ನು ಬರೆಯಲು ನಮಗೆ ಅವಕಾಶ ನೀಡುವ ನಿರ್ಧಾರವನ್ನ ನೀವು ತೆಗೆದುಕೊಳ್ಳಬಹುದು. ದಯವಿಟ್ಟು ಇದನ್ನ ಪರಿಗಣಿಸಿ. ನಾವು ಈ ದೇಶದ ಭವಿಷ್ಯ' ಎಂದಿದ್ದಾರೆ.
ಹಿಜಾಬ್ ಮೇಲಿನ ನಿಷೇಧವು ಈ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾದ ಪ್ರಿ-ಯೂನಿವರ್ಸಿಟಿ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳಲು ಬಯಸುವ ಅನೇಕ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ತನ್ನ ಆದೇಶದಲ್ಲಿ, ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನ ಪರಿಣಾಮಕಾರಿಯಾಗಿ ನಿಷೇಧಿಸುವ ಸರ್ಕಾರದ ಆದೇಶವನ್ನ ಎತ್ತಿಹಿಡಿದಿದೆ, ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂದು ಹೇಳಿದೆ. ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಈ ವಿಷಯಕ್ಕೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟಿನ ತೀರ್ಪಿನಿಂದ ಹತಾಶರಾಗಿರುವ ಅವರು ಇದೀಗ ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಭರವಸೆಯಿಂದ ಕಾಯುತ್ತಿದ್ದಾರೆ.