ಬಂಟ್ವಾಳ, ಏ 13 (DaijiworldNews/SM): ತಾಲೂಕಿನಾದ್ಯಂತ ಬುಧವಾರ ಸಂಜೆಯಿಂದ ಭಾರೀ ಗಾಳಿಮಳೆಯಾಗಿದ್ದು, ಸಿಡಿಲಿನ ಅಬ್ಬರಕ್ಕೆ ವಿವಿಧೆಡೆ ಹಾನಿ ಸಂಭವಿಸಿದೆ.
ಮಂಚಿ ಗ್ರಾಮದ ಕೇಪಳಗುರಿ ಎಂಬಲ್ಲಿ ಜಯಶ್ರೀ ಆಚಾರಿ ಅವರ ಮನೆ ಗೋಡೆ ಹಾಗೂ ಹಂಚುಗಳಿಗೆ ಹಾನಿಯಾಗಿದ್ದು ಮಳೆಗೆ ಮನೆ ಸಂಪೂರ್ಣ ಕುಸಿಯುವ ಸಂಭವವಿದೆ. ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿ ಆಯಿಷ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕ ಮತ್ತು ಗೋಡೆಗೆ ಹಾನಿ ಆಗಿದೆ. ಮಾಣಿ ಗ್ರಾಮದ ಶಂಭುಗ ಶೀನ ಮೂಲ್ಯ ಅವರ ವಿದ್ಯುತ್ ಮೀಟರ್ ಗೆ ಸಿಡಿಲು ಬಡಿದು ಹಾನಿ ಆಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.
ವಿಟ್ಲದಲ್ಲಿ ವಾಹನಗಳಿಗೆ ಹಾನಿ:
ಬುಧವಾರ ಸಂಜೆ ಸುರಿದ ಭಾರೀ ಮಳೆಗಾಳಿಗೆ ವಿಟ್ಲದ ವಿ. ಎಚ್. ಕಾಂಪ್ಲೆಕ್ಸ್ ನ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಟ್ಟಡದಿಂದ ಕಲ್ಲುಗಳು ಬಿದ್ದು ಹಲವು ವಾಹನಗಳು ಹಾನಿಗೊಂಡ ಘಟನೆ ನಡೆದಿದೆ.
ವಿಟ್ಲದಲ್ಲಿ ಸಂಜೆ ವೇಳೆ ಭಾರೀ ಬಿರುಗಾಳಿ ಸಹಿತ ಮಳೆ ಸುರಿದಿತ್ತು. ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಅಂಗಡಿ ಮಳಿಗೆಗಳ ಮುಂಭಾಗದ ಪಾರ್ಕಿಂಗ್ ನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಪಾರ್ಕಿಂಗ್ ನ ಮೇಲ್ಭಾಗಕ್ಕೆ ಬೀಸಿಲು ಬಾರದಂತೆ ಹಳದಿ ಬಟ್ಟೆಯ ಚಪ್ಪರಕ್ಕೆ ಅಳವಡಿಸಲಾಗಿದ್ದ ಹೋಲೊ ಬ್ಲಾಕ್ ಕಲ್ಲುಗಳ ರಾಶಿ ಗಾಳಿಗೆ ಕೆಳಗಡೆ ಕುಸಿದಿದೆ. ಇದರಿಂದ ಸುಮಾರು ಐದು ದ್ವಿಚಕ್ರ ವಾಹನಗಳು ಹಾನಿಗೊಂಡಿದೆ. ಸ್ಥಳದಲ್ಲಿ ಜನರು ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.