ಉಡುಪಿ, ಏ 13 (DaijiworldNews/DB): ಸುಮಾರು ಐದೂವರೆ ತಾಸು ಕಾಲ ನಡೆದ ಫೊರೆನ್ಸಿಕ್ ಪರೀಕ್ಷೆಯ ಬಳಿಕ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ಶಾಂಭವಿ ಲಾಡ್ಜ್ನಿಂದ ಮಣಿಪಾಲದ ಖಾಸಗಿ ಆಸ್ಪತ್ರೆ ಬಳಿಯಿರುವ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಲಾಯಿತು.
ಉಡುಪಿಯಿಂದ ಮಣಿಪಾಲಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಮೃತದೇಹವನ್ನು ರವಾನೆ ಮಾಡಲಾಯಿತು. ಮಣಿಪಾಲದ ಕೆಎಂಸಿ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಕೆಲವೇ ಕ್ಷಣಗಳಲ್ಲಿಹಿರಿಯ ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ಆರಂಭವಾಗಲಿದೆ. ಸಾವು ಸಂಭವಿಸಿ 40 ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಕ್ಕೆ ಪಾಟೀಲ್ ಕುಟುಂಬಿಕರು ಆಗಮಿಸಿದ್ದಾರೆ.
ಈಶ್ವರಪ್ಪ ಬಂಧನವಾಗದೆ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸುವುದಿಲ್ಲ ಎಂದು ಸಂಬಂಧಿಕರು ಪಟ್ಟು ಹಿಡಿದಿದ್ದರು. ಆದರೆ ಅಧಿಕಾರಿಗಳ ಮನವೊಲಿಕೆ ಬಳಿಕ ಮೃತದೇಹ ಕೊಂಡು ಹೋಗಲು ಸಂಬಂಧಿಕರು ಅನುಮತಿ ನೀಡಿದ್ದಾರೆ. ಕುಟುಂಬಿಕರು ಸಹಜವಾಗಿಯೇ ನೊಂದಿದ್ದಾರೆ. ಅಧಿಕಾರಿಗಳು ಮೃತ ಸಂತೋಷನ ಸಹೋದರರ ಮನವೊಲಿಸಲು ಸಫಲರಾಗಿದ್ದಾರೆ, ಲಾಡ್ಜ್ ನಲ್ಲಿರುವ ವಸ್ತುಗಳು ಮತ್ತು ಅವರ ಕಾರು ಪರಿಶೀಲನೆ ನಡೆಸಲಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಬೆಳಗಾವಿಗೆ ಕೊಂಡೊಯ್ಯುವ ಬಗ್ಗೆಇಲಾಖೆಯೊಂದಿಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.