ಮಂಗಳೂರು, ಏ 13 (DaijiworldNews/DB): ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಇದು ಕೊಲೆ ನಡೆಸಿರುವುದಕ್ಕೆ ಸಮಾನವಾಗಿದೆ. ಈ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಈಶ್ವರಪ್ಪ ಅವರನ್ನು ತತ್ಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದಲ್ಲದೆ, ಆರೋಪ ಎದುರಿಸುತ್ತಿದ್ದ ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆಯನ್ನೂ ಪಡೆಯಲಾಗಿತ್ತು. ಈ ಪ್ರಕರಣವನ್ನು ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಹೋಲಿಸಲಾಗದು. ಆದರೆ ಅವರು ಡೆತ್ನೋಟ್ ಬರೆದಿಟ್ಟಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದರು.
ರಾಜ್ಯ ಸರ್ಕಾರದ 40 ಪರ್ಸೆಂಟೇಜ್ ಬಗ್ಗೆ ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಿಳಿಸಿದ್ದರು. ಆದರೆ ಅವರು ಈ ವಿಚಾರವನ್ನು ನಿರ್ಲಕ್ಷಿಸಿದ್ದರು. ಇದರಿಂದಾಗಿ ಈಗ ಸಮಸ್ಯೆ ಬಿಗಡಾಯಿಸಿದೆ ಎಂದವರು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್, ಪ್ರಧಾನ ಕಾರ್ಯದರ್ಶಿಗಳಾದ ಕೃಪಾ ಅಮರ್ ಆಳ್ವ, ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ಹರಿನಾಥ್, ಪುರುಷೋತ್ತಮ ಚಿತ್ರಾಪುರ, ಜಯಶೀಲ ಅಡ್ಯಂತಾಯ, ಅಬ್ದುಲ್ ರವೂಫ್, ಅಶೋಕ್ ಡಿ.ಕೆ., ಉಮೇಶ್ ದಂಡಕೇರಿ, ಬೇಬಿ ಕುಂದರ್, ಮುಸ್ತಫ, ಶಬ್ಬೀರ್, ನಝೀರ್ ಬಜಾಲ್ ಇದ್ದರು.