ಉಡುಪಿ, ಏ 13 (DaijiworldNews/MS): ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅನುಮಾನಸ್ಪಾದವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಪಟ್ಟು ಪಂಚನಾಮೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೂವರು ಆರೋಪಿಗಳ ಬಂಧನ ಆಗುವ ತನಕ ಮೃತದೇಹವನ್ನು ತೆಗೆಯುವುದಿಲ್ಲ ಎಂದು ಸಂತೋಷ್ ಕುಟುಂಬಸ್ಥರು ಪಟ್ಟು ಹಿಡಿದ್ದಾರೆ.
ಪಂಚನಾಮೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಶಾಂಭವಿ ಲಾಡ್ಜ್ ನಿಂದ ಕುಟುಂಬಸ್ಥರು ಹೊರಬಂದಿದ್ದು ಮೃತರ ಸಹೋದರ ಪ್ರಶಾಂತ್ ಪಾಟೀಲ್, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿ, ನಾವು ಪೊಲೀಸರ ಈತನಕದ ಎಲ್ಲಾ ತನಿಖೆಗೆ ಸಹಕಾರ ಕೊಟ್ಟಿದ್ದೇವೆ. ಸಚಿವ ಕೆ.ಎಸ್ ಈಶ್ವರಪ್ಪ ಬಸವರಾಜ, ರಮೇಶ್ ಈ ಮೂವರು ಆರೋಪಿಗಳ ಬಂಧನದ ಬಳಿಕವೇ ಮುಂದಿನ ಪ್ರಕ್ರಿಯೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ಆಗುವ ಮೊದಲು ಆರೋಪಿಗಳ ಬಂಧನ ಆಗಬೇಕು. ಈ ಕಾರಣದಿಂದ ಉಡುಪಿಯ ಶಾಂಭವಿ ಲಾಡ್ಜ್ ನಿಂದ ಮೃತದೇಹವನ್ನು ಮಣಿಪಾಲಕ್ಕೆ ರವಾನೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ಸರಕಾರಕ್ಕೆ ನಾವು ಈಗಾಗಲೇ ನಮ್ಮ ಅಭಿಪ್ರಾಯವನ್ನು ನೀಡಿದ್ದೇವೆ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ.ಸಂತೋಷ ಆತ್ಮಕ್ಕೆ ಶಾಂತಿಗಾಗಿ ನಾವು ಈ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.