ಉಡುಪಿ, ಏ 13 (DaijiworldNews/DB): ಪಂಚನಾಮೆ ಪ್ರಗತಿಯಲ್ಲಿರುವುದರಿಂದ ಸಂತೋಷ್ ಆತ್ಮಹತ್ಯೆಗೆ ಶರಣಾದ ಉಡುಪಿಯ ಲಾಡ್ಜ್ ಆವರಣಕ್ಕೆ ಬಂದ ಮಾಜಿ ಸಚಿವ ವಿನಯಕುಮಾರ ಸೊರಕೆ ಅವರಿಗೆ ಲಾಡ್ಜ್ ಪ್ರವೇಶಿಸಲು ಪೊಲೀಸರು ಅವಕಾಶ ನಿರಾಕರಿಸಿದರು. ಪಂಚನಾಮೆ ಪೂರ್ಣಗೊಂಡ ಬಳಿಕ ಭೇಟಿಗೆ ಅವಕಾಶ ನೀಡುವುದಾಗಿ ಪೊಲೀಸರು ತಿಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸೊರಕೆ, ನಲ್ವತ್ತು ಪರ್ಸೆಂಟ್ ಕಮಿಷನ್ ಗಾಗಿ ಆತ್ಮಹತ್ಯೆ ನಡೆದಿರುವುದು ದೇಶದಲ್ಲೇ ಪ್ರಥಮವಾಗಿದೆ. ಇಂತಹ ದುರಂತದ ಮೂಲಕ ರಾಜ್ಯ ಸರ್ಕಾರ, ಈಶ್ವರಪ್ಪ ಪ್ರಸಿದ್ದಿ ಪಡೆಯುವಂತಾಗಿರುವುದು ವಿಪರ್ಯಾಸ. ಈ ಹಿಂದೆ ನೋಟು ಲೆಕ್ಕ ಮಾಡುವ ಮಿಷನ್ ಬಳಸಿ ಪ್ರಸಿದ್ಧರಾಗಿದ್ದರು ಎಂದರು.
ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಕೇವಲ ಸಂತೋಷ್ ಪಾಟೀಲ್ಗಷ್ಟೇ ಅಲ್ಲ. ಆದೇಶ ಇಲ್ಲದೆ ಗುತ್ತಿಗೆ ಕೆಲಸ ಮಾಡಿದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಹಲವರು ಬಿಲ್ ಆಗದೇ ಕಾಯುತ್ತಿದ್ದಾರೆ. ಸಂತೋಷ್ ಪಾಟೀಲ್ ನ್ಯಾಯಕ್ಕಾಗಿ ದಿಲ್ಲಿಗೂ ಹೋಗಿ ಬಂದಿದ್ದಾರೆ. ಪ್ರಧಾನಿ, ಅಮಿತ್ ಶಾ ಭೇಟಿಗೂ ಪ್ರಯತ್ನಿಸಿದ್ದಾರೆ. ಆದರೆ, ಕೊನೆಗೆ ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗಿ ಬಂದಿರುವುದು ದುರಂತ. ಭ್ರಷ್ಟಾಚಾರಕ್ಕೆ ನಿಗ್ರಹದ ಭರವಸೆ ನೀಡಿದ ಪಕ್ಷ ಬಿಜೆಪಿ. ಆದರೆ ಅದೇ ಕಾರಣಕ್ಕೆ ಆತ್ಮಹತ್ಯೆಯೊಂದು ನಡೆದು ಹೋಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟ ತಲುಪುವಂತಾಯಿತು. ವಿದ್ಯಾಭ್ಯಾಸ ದಲ್ಲಿ ಮುಂದಿದ್ದ ಉಡುಪಿ ಜಿಲ್ಲೆಯಲ್ಲಿ ನಿರಂತರ ವಿವಾದ, ದುರಂತ ಸಂಭವಿಸುತ್ತಿದೆ. ಬಿಜೆಪಿ ಮತ್ತು ಅದರ ಕಾರ್ಯಕರ್ತರೇ ಬಿಜೆಪಿ ಕಾರ್ಯಕರ್ತರ ಸಾವಿಗೆ ಕಾರಣರಾಗುತ್ತಿದ್ದಾರೆ. ಉದಯ ಗಾಣಿಗ, ಪ್ರವೀಣ್ ಪೂಜಾರಿ. ಕೋಟದ ಡಬ್ಬಲ್ ಮರ್ಡರ್ ಮುಂತಾದವು ನಡೆದು ಹೋಗಿವೆ. ಪ್ರಸ್ತುತ ಆ ಪಕ್ಷವು ಆತ್ಮಹತ್ಯೆಗೂ ಕಾರಣವಾಗಿದೆ ಎಂದ ಅವರು, ಕಾಂಗ್ರೆಸ್ನ ಕೆ.ಜೆ. ಜಾರ್ಜ್ ಮೇಲೆ ಆರೋಪ ಬಂದಿದ್ದಾಗ ಅವರು ರಾಜೀನಾಮೆ ನೀಡಿದ್ದರು. ಪ್ರಸ್ತುತ ಈಶ್ವರಪ್ಪ ಅವರೂ ರಾಜೀನಾಮೆ ನೀಡಲಿ. ಇಲ್ಲವಾದರೆ ಜನರೇ ರೊಚ್ಚಿಗೆದ್ದು ರಾಜೀನಾಮೆ ಕೊಡುವಂತೆ ಮಾಡುತ್ತಾರೆ ಎಂದರು.