ಉಡುಪಿ, ಏ 13 (DaijiworldNews/DB): ಗುತ್ತೇದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನ ಪ್ರಕಾರ ಕೆ.ಎಸ್. ಈಶ್ವರಪ್ಪ ಮತ್ತು ಇಬ್ಬರು ಆಪ್ತರ ಮೇಲೆ ಎಫ್ ಐಆರ್ ದಾಖಲು ಮಾಡಲಾಗಿದ್ದು, ಪಂಚನಾಮೆ ಪ್ರಕ್ರಿಯೆ ಕೆಲ ಕ್ಷಣಗಳ ಹಿಂದೆ ಆರಂಭವಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಹೇಳಿದ್ದಾರೆ.
ಉಡುಪಿಯ ಶಾಂಭವಿ ಲಾಡ್ಜ್ ಗೆ ಬುಧವಾರ ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹತ್ತಿರದ ಸಂಬಂಧಿಕರ ಮುಂಭಾಗದಲ್ಲೇ ಎಲ್ಲಾ ಪರಿಶೀಲನೆ ಮಾಡಲಾಗುತ್ತಿದೆ. ಡಿಜಿಟಲ್ ಮತ್ತು ಸಾಂದರ್ಭಿಕ ಸ್ಥಳದಲ್ಲಿ ಇರುವಂತಹ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.
ಕೆಎಂಸಿ ಮತ್ತು ಮಂಗಳೂರಿನ ಫೋರೆನ್ಸಿಕ್ ತಜ್ಞರು ಜೊತೆಗಿದ್ದಾರೆ. ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು. ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇನ್ನು 3ರಿಂದ 4 ಗಂಟೆಗಳ ಕಾಲ ಪ್ರಕ್ರಿಯೆ ನಡೆಯಬಹುದು. ನಾವು ಎಲ್ಲಾ ರೀತಿಯ ಸೂಕ್ತ ತನಿಖೆಗಳನ್ನು ಮಾಡುತ್ತೇವೆ ಎಂದರು. ಸಂತೋಷ್ ಕುಟುಂಬಸ್ಥರು ಬಹಳ ನೊಂದಿದ್ದಾರೆ. ನಿನ್ನೆ ಏನೂ ತನಿಖೆ ಮಾಡಿಲ್ಲ.
ಇಂದು ಅವರ ಹತ್ತಿರದ ಸಂಬಂಧಿಕರನ್ನು ತನಿಖೆ ಮಾಡುತ್ತೇವೆ. ಮೇಲ್ನೋಟಕ್ಕೆ ಆತ್ಮಹತ್ಯೆ ಅಸಹಜ ಸಾವು ಎಂದು ಕಂಡು ಬಂದಿದೆ. ತನಿಖೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಪಂಚನಾಮೆಯಲ್ಲಿ ಸಿಕ್ಕ ಮೇಲೆ ಪೂರ್ಣ ಮಾಹಿತಿ ಹೇಳಬಹುದು ಎಂದು ಐಜಿಪಿ ದೇವಜ್ಯೋತಿ ರೇ ತಿಳಿಸಿದರು.