ಸುಳ್ಯ,ಡಿ 28(MSP):ಮದುವೆ ಮನೆಯಲ್ಲಿ ಶಾಮಿಯಾನ ಹಾಕುತ್ತಿರುವಾಗ ಸಮೀಪದಲ್ಲೇ ಇದ್ದ ವಿದ್ಯುತ್ ತಂತಿಗೆ ತಾಗಿ ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಕ್ಕಿಯ ಉಳಿಯ ದಿ. ಸತ್ಯನಾರಾಯಣ ಅವರ ಪುತ್ರ ಪ್ರೀತೇಶ್(19) ಎಂಬವರು ಮೃತಪಟ್ಟ ಘಟನೆ ಡಿ.27ರ ಗುರುವಾರ ಸಂಜೆ ನಡೆದಿದೆ.
ಅವರು ಎಲಿಮಲೆಯ ಪ್ರಸಾದ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಎಲಿಮಲೆಯ ಮನೆಯೊಂದರಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದ ನಿಮಿತ್ತ ಪ್ರೀತೇಶ್ ಇತರರೊಂದಿಗೆ ಶಾಮಿಯಾನ ಹಾಕಲೆಂದು ತೆರಳಿದ್ದು, ಈ ವೇಳೆ ವಿದ್ಯುತ್ ಶಾಕ್ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಮಗನ ಅಗಲಿಕೆಯಿಂದ ತಾಯಿಯ ರೋಧನ ಮುಗಿಲು ಮುಟ್ಟಿತ್ತು.