ಮಂಗಳೂರು, ಏ 13 (DaijiworldNews/MS): ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣ ಸಂಬಂಧ ಕೆ.ಎಸ್ ಈಶ್ವರಪ್ಪ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಹಿನ್ನಲೆಯಲ್ಲಿ ಖುದ್ದು ಅವರೊಂದಿಗೆ ಮಾತುಕತೆ ನಡೆಸಿ ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, "ಈಗಾಗಲೇ ನಾನು ಸಚಿವ ಈಶ್ವರಪ್ಪ ಅವರಲ್ಲಿ ದೂರವಾಣಿ ಮೂಲಕ ಮಾತನಾಡಿದ್ದೇನೆ. ಘಟನೆಯ ಬಗ್ಗೆ ಸಮಗ್ರವಾಗಿ ವೆಂಗಳೂರಿನಲ್ಲಿ ಅವರೊಂದಿಗೆ ಚರ್ಚಿಸಿ, ಮಾಹಿತಿ ಕಲೆ ಹಾಕಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇನೆ" ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಸಿಎಂ ಹೇಳಿದರೆ ರಾಜೀನಾಮೆ ನೀಡುವ ಎಂಬ ಸಚಿವ ಈಶ್ವರಪ್ಪ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ನನಗೆ ತಿಳಿದಿಲ್ಲ. ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ. ಕಾಂಗ್ರೆಸ್ ಇದರಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿದೆ. ಆದರೆ ತನಿಖೆಯಲ್ಲಿ ಸತ್ಯಾಂಶ ಗೊತ್ತಾಗಲಿದೆ. ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವನ್ನು ಮಾಡೋದಿಲ್ಲ ಎಂದು ತಿಳಿಸಿದ್ದಾರೆ.