ಬೆಂಗಳೂರು,ಡಿ 28(MSP):ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಟ್ಟಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಗುರುವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ನಿಲ್ದಾಣದಲ್ಲಿ ಸ್ವಲ್ಪ ಸಮಯದ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಿಲ್ದಾಣದಿಂದ ಮಂಗಳೂರಿಗೆ ಬೆಳಿಗ್ಗೆ 7 ಗಂಟೆಗೆ ಹಾರಾಟ ನಡೆಸಬೇಕಿದ್ದ ‘9ಡಬ್ಲ್ಯು713’ ಸಂಖ್ಯೆ ವಿಮಾನದಲ್ಲಿ ಪ್ರಯಾಣಿಕರು ಏರುವ ವೇಳೆಯೇ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಅದನ್ನು ಗಮನಿಸಿದ ಪೈಲಟ್, ನಿಲ್ದಾಣದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ಪ್ರಯಾಣಿಕರನ್ನೆಲ್ಲ ಕೆಳಗೆ ಇಳಿಸಿದರು ಎಂದು ಮೂಲಗಳು ತಿಳಿಸಿವೆ.
‘ವಿಮಾನದಲ್ಲಿ ಮಂಗಳೂರಿಗೆ ಹೋಗಲು 71 ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದರು. ನಿಗದಿತ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ, ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಮಂಗಳೂರಿಗೆ ಕಳುಹಿಸಿಕೊಡಲಾಯಿತು’ ಎಂದು ತಿಳಿದುಬಂದಿದೆ.