ಉಡುಪಿ, ಏ 13 (DaijiworldNews/MS): ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಚಿವ ಈಶ್ವರಪ್ಪ ಹಾಗೂ ಆಪ್ತರಾದ ಬಸವರಾಜ ಮತ್ತು ಸಚಿವರ ಆಪ್ತ ಸಹಾಯಕ ರಮೇಶ್ ವಿರುದ್ಧ ಮೃತರ ಸಂಬಂಧಿ ಬೆಳಗಾವಿಯ ಪ್ರಶಾಂತ ಗೌಡಪ್ಪ ಪಾಟೀಲ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎ. 13ರಂದು ನಸುಕಿನ ಜಾವ ಪ್ರಕರಣ ದಾಖಲಾಗಿದೆ.
ಮಂಗಳವಾರ ತಡರಾತ್ರಿ ಸಂತೋಷ ಪಾಟೀಲ ಅವರು ನಿಗೂಢವಾಗಿ ಸಾವನ್ನಪ್ಪಿದ ಉಡುಪಿಯ ಲಾಡ್ಜ್ ಗೆ ಅವರ ಸಹೋದರ ಪ್ರಶಾಂತ ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಹೋಟೆಲ್ ಕೊಠಡಿಗೆ ಭೇಟಿ ನೀಡಿದ ಬಳಿಕ ದೂರು ನೀಡಿದ್ದಾರೆ.
ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಪಾಟೀಲ್ ಅವರು 4 ಕೋಟಿ ರೂ.ಗಳ ಕಾಮಗಾರಿ ನಡೆಸಿದ್ದರು. ಸಂತೋಷ್ ಅವರು ಯೋಜನೆಗೆ ಹಣ ಹೂಡಿದ್ದರು.ಆದರೆ ಕಾಮಗಾರಿಯ ಬಿಲ್ ಬಾಕಿ ಉಳಿದಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಹಲವು ಬಾರಿ ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅವರು ಶೇ. 40 ರಷ್ಟು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಆರೋಪ ಮಾಡಿದ್ದರು.
ಕಾಮಗಾರಿಗಳ ಬಿಲ್ ವಿಷಯವಾಗಿ ಕೆ.ಎಸ್ ಈಶ್ವರಪ್ಪ ಅವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತನ್ನ ಪತ್ನಿ ಹಾಗು ಇತರರೊಂದಿಗೂ ತಿಳಿಸುತ್ತಿದ್ದರು. ಇದೇ ಬಿಲ್ ಪಾಸ್ ಆಗದ ಕಾರಣ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ವಿರುದ್ಧ ವಿಡಿಯೋ ಫೂಟೇಜ್ ಮುಖೇನ 4 ಕೋಟಿ ಕಾಮಗಾರಿ ಹಣದ ಬಿಲ್ ನ್ನು ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಮಾಧ್ಯಮಗಳ ಮೂಲಕ ವಿಷಯ ಪ್ರಸ್ತಾಪಿಸಿರುತ್ತಾರೆ. ಸಂತೋಷ್ ಅವರು ಅನೇಕ ರೀತಿಯ ರಸ್ತೆ ಕಾಮಗಾರಿಗಳಿಗೆ ಹಣ ಹಾಕಿದ್ದರಿಂದ ಅಡಚಣೆಯಾಗಿ 40 ಪರ್ಸೆಂಟ್ ಕಮೀಷನ್ ವಿಷಯದ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರುಣ್ ಸಿಂಗ್ ಅವರಿಗೆ ಹಾಗೂ ದೆಹಲಿ ಬಿಜೆಪಿ ವರಿಷ್ಟರಿಗೆ, ಪ್ರಧಾನ ಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಬಿಲ್ ಪಾಸು ಮಾಡದ ಹಾಗೂ 40 ಪರ್ಸೆಂಟ್ ಕಮೀಷನ್ ಕುರಿತು ಮನವಿ ಸಲ್ಲಿಸಿದ್ದಾರೆ. ಆದರೂ ಸಹ ಬಿಲ್ ಪಾಸ್ ಆಗಿರುವುದಿಲ್ಲ. ಅದೇ ವಿಷಯದಲ್ಲಿ ಸಂತೋಪ್ ಪಾಟೀಲ್ ಆರೋಪಿಗಳಾದ ಕೆ.ಎಸ್ ಈಶ್ವರಪ್ಪ ಹಾಗೂ ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ವಿರುದ್ಧ ಮನನೊಂದು ತನ್ನ ಮೊಬೈಲಿನಿಂದ ವಾಟ್ಸಪ್ ಡೆತ್ ನೋಟ್ ಸಂದೇಶವನ್ನು ಮಾಧ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿರುವುದಾಗಿ ಅಲ್ಲದೆ ಅನುಮಾನಾಸ್ಪದ ಸಾವು ಉಂಟಾಗಿದ್ದು ಈ ಸಾವಿಗೆ ಕಾರಣರಾದ ಕೆ.ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರು ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.