ಮಂಗಳೂರು, ಏ 12 (DaijiworldNews/SM): ಈಶ್ವರಪ್ಪ ವಿರುದ್ದ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಇದ್ದ ಹೊಟೇಲ್ ಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಮಂಗಳೂರಿನ ಓಷಿಯನ್ ಪರ್ಲ್ ಹೊಟೇಲ್ ಗೆ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ನುಗ್ಗಲು ಯತ್ನಿಸಿದರು. ಸಿಎಂ ಬೊಮ್ಮಾಯಿ ಸಭೆ ನಡೆಸುತ್ತಿದ್ದ ಖಾಸಗಿ ಹೊಟೇಲ್ ಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ನುಗ್ಗಲು ಯತ್ನಿಸಿದ್ದರು.
ಏಕಾಏಕಿ ನುಗ್ಗಲು ಯತ್ನಿಸಿದ್ದರಿಂದ ಪೊಲೀಸರು ತಬ್ಬಿಬ್ಬಾದರು. ತಕ್ಷಣ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಳ್ಳಾಡಿದರು. ಹೊಟೇಲ್ ಬಾಗಿಲಿನಿಂದ ರಸ್ತೆಯ ತನಕ ಕಾಂಗ್ರೆಸ್ ಕಾರ್ಯಕರ್ತರನ್ನು ತಳ್ಳಿಕೊಂಡೇ ಹೋದರು. ಬಳಿಕ ಕಾರ್ಯಕರ್ತರನ್ನ ಬಂಧಿಸಿ ಕರೆದೊಯ್ದರು.