ಮಂಗಳೂರು, ಏ 12 (DaijiworldNews/DB): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಪಾರದರ್ಶಕ ತನಿಖೆ ನಡೆಸಲಾಗುವುದು. ತನಿಖೆಯ ಪ್ರಾಥಮಿಕ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತಾನಾಡಿದ ಅವರು, ಸಂತೋಷ್ ಪಾಟೀಲ್ ಮೃತದೇಹ ಉಡುಪಿಯ ಲಾಡ್ಜ್ ನಲ್ಲಿ ಪತ್ತೆಯಾಗಿದೆ. ಖುದ್ದು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾರೆ. ಸ್ಥಳದಲ್ಲಿ ಡೆತ್ನೋಟ್ ಕೂಡಾ ಪತ್ತೆಯಾಗಿದೆ. ಪ್ರಕರಣ ಕುರಿತಂತೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದೀಗ ಘಟನೆಯ ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ವರದಿ ಬಂದ ತತ್ಕ್ಷಣ ಮುಂದಿನ ಕ್ರಮ ಏನೆಂದು ಚರ್ಚಿಸಲಾಗುವುದು ಎಂದು ತಿಳಿಸಿದರು.
ಪಾರದರ್ಶಕ ತನಿಖೆ ಖಂಡಿತಾ ನಡೆಯಲಿದೆ. ಪ್ರಕರಣ ಸಂಬಂಧ ಈಶ್ವರಪ್ಪ ಹೆಸರು ಕೇಳಿ ಬರುತ್ತಿದೆ. ಆದರೆ ಈಶ್ವರಪ್ಪ ಪ್ರಸ್ತುತ ಮೈಸೂರಿನಲ್ಲಿದ್ದಾರೆ. ಅವರನ್ನು ನಾನೇ ಈ ಬಗ್ಗೆ ವಿಚಾರಿಸುತ್ತಿದ್ದೇನೆ. ಸಂತೋಷ್ ಆತ್ಮಹತ್ಯೆಗೆ ಕಾರಣ ಏನೆಂಬುದು ತನಿಖೆ ಬಳಿಕ ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಇದೇ ವೇಳೆ ಉತ್ತರಿಸಿದರು.