ಕುಂದಾಪುರ, ಏ 12 (DaijiworldNNews/HR): ರಸ್ತೆಯನ್ನು ಆಕ್ರಮಿಸಿಕೊಂಡು ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತದೆ. ಅದಕ್ಕೆ ಪರವಾನಿಗೆ ಕೊಡುತ್ತಿರಿ. ರಿಕ್ಷಾ ನಿಲ್ದಾಣಕ್ಕೆ ಕಿರುಕುಳ ಕೊಡುತ್ತಿರಿ. ಅನಧಿಕೃತ ಕಟ್ಟಡಗಳನ್ನು ನಾವು ತೋರಿಸಿಕೊಡುತ್ತೇವೆ. ನೀವು ತೆರವು ಮಾಡುತ್ತಿರಾ ಎಂದು ಭಾರತೀಯ ಆಟೋರಿಕ್ಷಾ ಮಜ್ದೂರ್ ಸಂಘದ ಕುಂದಾಪುರ ಸ್ಥಾಪಕ ಅಧ್ಯಕ್ಷ ಶಂಕರ ಅಂಕದಕಟ್ಟೆ ಪುರಸಭೆಗೆ ಅವರು ಸವಾಲು ಹಾಕಿದರು.
ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಆಟೋ ಹಾಗೂ ಗೂಡ್ಸ್ ವಾಹನಗಳಿಗೆ ಸೂಕ್ತ ನಿಲ್ದಾಣ ಗುರುತಿಸಿ, ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಪುರಸಭೆಗೆ ಮುತ್ತಿಗೆ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಒಂದೇ ಒಂದು ಅಧಿಕೃತ ನಿಲ್ದಾಣಗಳಿಲ್ಲ. ಪುರಸಭೆಯ ಮೃದು ಧೋರಣೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹೇಳಿದರು.
ಚುನಾಯಿತ ಪ್ರತಿನಿಧಿಗಳು ಆಟೋ ಚಾಲಕರನ್ನು ನಿರ್ಲಕ್ಷ್ಯ ಮಾಡಬೇಡಿ. ಒಂದೊಂದು ಬೂತ್ಗಳಲ್ಲಿ ಆಟೋಚಾಲಕರೇ ನಿರ್ಣಯಕರಾಗಿರುತ್ತಾರೆ. ಮುಂದಿನ ಚುನಾವಣೆಗಳಲ್ಲಿ ಸೂಕ್ತ ಉತ್ತರ ಆಟೋಚಾಲಕರು ನೀಡುತ್ತಾರೆ ಎಂದು ಎಚ್ಚರಿಸಿದರು.
ಆಟೋರಿಕ್ಷಾ, ಟ್ಯಾಕ್ಷಿ, ಮೆಟಾಡೋರ್ ಡ್ರೈವರ್ಸ್ ಎಸೋಸಿಯೇಶನ್ (ಇಂಟಕ್) ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿ, 1987ರಿಂದ ರಿಕ್ಷಾ ನಿಲ್ದಾಣ ಅಧಿಕೃತಗೊಳಿಸಲು ಮನವಿ ಕೊಡುತ್ತಲೇ ಬಂದಿದ್ದೇವೆ. ಇನ್ನೂ ಕೂಡಾ ನಮ್ಮ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಪುರಸಭೆಯಿಂದ ಆಗಿಲ್ಲ. ರಸ್ತೆ ಅಗಲೀಕರಣವಾಗುತ್ತಿದೆ. ಕಟ್ಟಡಗಳು ತಲೆ ಎತ್ತುತ್ತಿವೆ. ರಿಕ್ಷಾ ನಿಲ್ದಾಣಗಳಿಗೆ ಸ್ಥಳವಿಲ್ಲ. ನಮಗೂ ಖಾಯಂ ಸ್ಥಳ ನೀಡಿ ಎಂದು ಆಗ್ರಹಿಸಿದರು.
ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕ ಸಂಘ (ಸಿಐಟಿಯು) ಅಧ್ಯಕ್ಷ ಚಂದ್ರಶೇಖರ ಮಾತನಾಡಿ, ಆಟೋ ಚಾಲಕರ ವಿಚಾರದಲ್ಲಿ ಪುರಸಭೆಯ ನಿರ್ಲಕ್ಷ್ಯ ಧೋರಣೆ, ಹಾರಿಕೆಯ ಉತ್ತರ, ತಾಂತ್ರಿಕ ಸಮಸ್ಯೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಸೇವಾವಲಯದಲ್ಲಿ ನಮ್ಮ ಆಟೋ ರಿಕ್ಷಾದವರ ಸೇವೆ ಮಹತ್ತರವಾದುದು. ಕೋರೋನಾ ಸಂದಿಗ್ದತೆಯಲ್ಲಿ ಆರೋಗ್ಯ ಕ್ಷೇತ್ರ ಪಿಪಿ ಕಿಟ್ ಧರಿಸಿಕೊಂಡು ರೋಗಿಗಳ ಉಪಚರಿಸಿದರೆ ರಿಕ್ಷಾ ಚಾಲಕರು ಅನಾರೋಗ್ಯ ಪೀಡಿತರನ್ನು ಯಾವುದೇ ರಕ್ಷಣಾ ಪರಿಕರವಿಲ್ಲದೇ ಆಸ್ಪತ್ರೆಗಳಿಗೆ, ಮನೆಗಳಿಗೆ ಕರೆದೋಯ್ದಿದ್ದಾರೆ. ಇದನ್ನೆಲ್ಲಾ ಗಮನಿಸದೇ ಕನಿಷ್ಠ ಹಳ್ಳಿಗಳಲ್ಲಿ ಇರುವ ಸೌಲಭ್ಯವನ್ನು ಪುರಸಭಾ ವ್ಯಾಪ್ತಿಯಲ್ಲಿ ನಮಗಿಲ್ಲವಾಗಿದೆ ಎಂದು ದೂರಿದರು.
ಪುರಸಭೆ ಕೂಡಲೇ ಆಟೋ ಹಾಗೂ ಗೂಡ್ಸ್ ವಾಹನಗಳಿಗೆ ನಿಲ್ದಾಣವನ್ನು ಗುರುತಿನ ಪ್ರಕಟಣೆ ಹೊರಡಿಸಬೇಕು, ನಿಲ್ದಾಣಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು, ಪುರಸಭೆ ವ್ಯಾಪ್ತಿಯೊಳಗೆ ಹದಗೆಟ್ಟಿರುವ ಎಲ್ಲಾ ರಸ್ತೆಗಳನ್ನು ಶೀಘ್ರದಲಿ ದುರಸ್ತಿಗೊಳಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು, ಆಟೋರಿಕ್ಷಾ ಚಾಲಕರ ಸಮಸ್ಯೆಗಳು ನಮ್ಮ ಗಮನದಲ್ಲಿದ್ದು, ಶೀಘ್ರ ಈ ಬಗ್ಗೆ ಸಂಬಂಧಪಟ್ಟವರ ಸಭೆ ನಡೆಸಿ ಸಮಸ್ಯೆಗಳ ಸಭೆಯಲ್ಲಿ ಪ್ರಸ್ತಾವಿಸಲಾಗುವುದು. ಸಭೆಗೆ ಆಟೋ ರಿಕ್ಷಾ ಸಂಘದ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಶೀಘ್ರ ಸಮಸ್ಯೆ ಇತ್ಯರ್ಥಗೊಳಿಸುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಉಪಸ್ಥಿತರಿದ್ದರು.