ಉಡುಪಿ, ಏ 12 (DaijiworldNNews/HR): ಸಚಿವ ಕೆ. ಎಸ್ ಈಶ್ವರಪ್ಪ ವಿರುದ್ಧ ಡೆತ್ ನೋಟ್ ಬರೆದಿದ್ದ ಸಂತೋಷ್ ಪಾಟೀಲ್ ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಲಾಡ್ಜ್ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ತಾವು ಮಾಡಿದ 108 ಕಾಮಗಾರಿ ಬಿಲ್ ಪಾವತಿಗೆ ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಆರೋಪಿಸಿ ಗುತ್ತಿಗೆದಾರ ಸಂತೋಷ ಪಾಟೀಲ್ ಮಾಧ್ಯಮ ಪ್ರತಿನಿಧಿಗಳ ಮೊಬೈಲ್ಗೆ 'ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ' ಎಂದು ಡೆತ್ನೋಟ್ ವಾಟ್ಸಪ್ ಮೆಸೇಜ್ ಕಳಿಸಿ ನಾಪತ್ತೆಯಾಗಿದ್ದ.
ಇನ್ನು ಡೆತ್ನೋಟ್ ಮೆಸೇಜ್ ಮಾಹಿತಿ ಬೆನ್ನಲ್ಲೇ ಸಂತೋಷ ಪಾಟೀಲ್ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾಗ ಸಂತೋಷ ಮೊಬೈಲ್ ಉಡುಪಿಯಲ್ಲಿ ಆ್ಯಕ್ಟೀವ್ ಎಂಬ ಮಾಹಿತಿ ಲಭಿಸಿತ್ತು.
ಬೆಳಗಾವಿಯ ಸಂತೋಷ ಪಾಟೀಲ್ ನಿವಾಸ ಒಂದು ವಾರದಿಂದ ಲಾಕ್ ಆಗಿದೆ ಎಂದು ಸ್ಥಳೀಯರ ಮಾಹಿತಿ ನೀಡಿದ್ದು, ಇದೀಗ ಉಡುಪಿಯ ಲಾಡ್ಜಿಂಗ್ ಒಂದರಲ್ಲಿ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಸಂತೋಷನ ಇಬ್ಬರೂ ಗೆಳೆಯರು ಪಕ್ಕದ ಕೊಠಡಿಯಲ್ಲಿ ಪತ್ತೆಯಾಗಿದ್ದು, ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.