ಬೆಳ್ತಂಗಡಿ, ಏ 12 (DaijiworldNews/DB): ಎಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತಾಯಿಯೊಂದಿಗೆ ಸ್ಕೂಟರ್ನಲ್ಲಿ ಆಗಮಿಸುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿನಿಯೋರ್ವಳು ಗಾಯಗೊಂಡರೂ ಪರೀಕ್ಷೆ ಬರೆದಿದ್ದಾರೆ.
ಸೋಮವಾರ ಎಸೆಸ್ಸೆಲ್ಸಿಗೆ ಕೊನೆಯ ದಿನದ ವಿಜ್ಞಾನ ಪರೀಕ್ಷೆ ಇತ್ತು. ಈ ಪರೀಕ್ಷೆಗೆ ಲಾಯಿಲ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಬೆಳ್ತಂಗಡಿಯ ನಾವೂರು ಸಂಪಿಂಜಾ ನಿವಾಸಿ ಲಕ್ಷ್ಮಣ-ಮಮತಾ ದಂಪತಿಯ ಪುತ್ರಿ ತನ್ವಿ ತನ್ನ ತಾಯಿಯೊಂದಿಗೆ ಸ್ಕೂಟರ್ನಲ್ಲಿ ಬರುತ್ತಿದ್ದರು. ಲಾಯಿಲದ ಪುತ್ರಬೈಲ್ನಲ್ಲಿ ಬರುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ಕಾರಣ ತನ್ವಿಯ ಮುಖ, ಕೈ, ಕಾಲಿಗೆ ಗಾಯವಾಗಿತ್ತು. ತತ್ಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿತ್ತು. ತನ್ವಿಗೆ ಕೈಗೆ ಗಾಯವಾಗಿದ್ದ ಕಾರಣ ಸ್ಟ್ರೆಚರ್ನಲ್ಲಿ ಮಲಗಿಸಿ ಅದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯರ ಸಹಾಯದೊಂದಿಗೆ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. ಪ್ರಥಮ ಚಿಕಿತ್ಸೆ ಪಡೆದು ವಿದ್ಯಾರ್ಥಿನಿ ನೇರವಾಗಿ ಬೆಳ್ತಂಗಡಿಯ ವಾಣಿ ಪ್ರೌಢಶಾಲಾ ಪರೀಕ್ಷಾ ಕೇಂದ್ರಕ್ಕೆ ಹಾಜರಾದರು. ಪ್ರತ್ಯೇಕ ಕೊಠಡಿಯಲ್ಲಿ ಬೇರೆ ವಿದ್ಯಾರ್ಥಿನಿ ಸಹಾಯದೊಂದಿಗೆ ತನ್ವಿ ಪರೀಕ್ಷೆ ಎದುರಿಸಿದರು.
ಉಜಿರೆ ಬೆನಕ ಆಸ್ಪತ್ರೆ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು. ನರ್ಸ್ ನಳಿನಾಕ್ಷಿ ಮತ್ತು ಚಾಲಕ ದಿನೇಶ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ಸಹಕರಿಸಿದರು. ಆಕೆಯ ಚಿಕಿತ್ಸಾ ವೆಚ್ಚವನ್ನು ಲಾಯಿಲ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಭರಿಸಿದೆ.