ಉಡುಪಿ, ಏ 12 (DaijiworldNNews/HR): ಕಾಂಗ್ರೆಸ್, ಜೆಡಿಎಸ್ಗಳ ಹಾಗೆ ಬಿಜೆಪಿಯು ಓಲೈಸುವ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನ್ನ ಮೌನ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ತೊಂದರೆಯಾದರೆ ನಾನೇನು ಮಾಡಲಿ. ಅವರಿಬ್ಬರು ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ. ನಾವು ಸರ್ಕಾರದಲ್ಲಿರುವವರು, ಕೆಲಸ ಮಾಡುವ ಸ್ಥಳದಲ್ಲಿ ಇದ್ದೇವೆ. ಯಾವ ಯಾವ ಸಂದರ್ಭ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಂಡಿದ್ದೇವೆ ಎಂದರು.
ಇನ್ನು ಶಿವಮೊಗ್ಗ ಘಟನೆಯಾದಾಗ ಕ್ರಮ ತೆಗೆದುಕೊಂಡಿದ್ದೇವೆ. ಧಾರವಾಡ ಘಟನೆ ಆದಾಗ ಕೂಡ ಕ್ರಮ ಜರಗಿಸಿದ್ದೇವೆ. ಕೋಲಾರ ಘಟನೆ ಸಂದರ್ಭ ಕ್ರಮ ತೆಗೆದುಕೊಂಡಿದ್ದೇವೆ. ಇವರ ಹಾಗೆ ಓಲೈಸುವ ರಾಜಕಾರಣ ಮಾಡಿಲ್ಲ ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ.
ಕೊರೊನಾ ಮಾರ್ಗಸೂಚಿ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆ ಕೊರೊನಾ ಬಂದ ಅನುಭವ ನಮ್ಮ ಜೊತೆಗಿದೆ. 1,2,3 ಅಲೆಯ ಅನುಭವದ ಹಿನ್ನೆಲೆ ಇದ್ದು, ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮ ಕೈಗೊಳ್ಳುತ್ತಿದ್ದೇವೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಮಾರ್ಗಸೂಚಿ ಪಾಲನೆ ಆದರೆ ಯಾವುದೇ ಸಂದರ್ಭವನ್ನು ಎದುರಿಸಬಹುದು ಎಂದಿದ್ದಾರೆ.