ಮಂಗಳೂರು, ಡಿ 27(SM): ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಯ ಸಾಮಾಗ್ರಿಗಳ ಅಕ್ರಮ ದಾಸ್ತಾನು ಇರಿಸಿದ್ದ ಮಂಗಳೂರಿನ ದಂಬೇಲ್ ಬಳಿಯ ಗೋಡೌನ್ ಗೆ ದಾಳಿ ನಡೆಸಿದ ಪೊಲೀಸರು, ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೂ ಲಾರಿ ಮತ್ತು ಬಿಸಿಯೂಟ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಪ್ಪಳ ನಿವಾಸಿ ಬಸವರಾಜು, ಮಂಗಳೂರಿನ ಅಶೋಕನಗರ ನಿವಾಸಿ ಚಂದ್ರ ಕುಮಾರ್, ಚಿಲಿಂಬಿ ನಿವಾಸಿ ರಕ್ಷಿತ್ ಬಂಧಿತ ಆರೋಪಿಗಳು.
ಆರೋಪಿಗಳಿಂದ 25 ಕೆ.ಜಿ. ತೂಕದ ನಂದಿನಿ ಹಾಲಿನ ಹುಡಿಯ 7 ಬ್ಯಾಗ್ ಗಳು, ಒಂದು ಕ್ವಿಂಟಾಲ್ ತೊಗರಿಬೇಳೆ, 2.5 ಕ್ವಿಂಟಾಲ್ ಅಕ್ಕಿ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 10,49,200 ರೂಪಾಯಿ ಎಂದು ಅಂದಾಜಿಸಲಾಗಿದೆ.
ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಯವರಾದ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ ರಾಜಲಕ್ಷ್ಮಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ಕುರಿತಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.