ಕುಂದಾಪುರ, ಡಿ 27(SM): ಬಾರಕೂರಿನಲ್ಲಿ ಅಳುಪೋತ್ಸವ ಕಾರ್ಯಕ್ರಮ ಜನವರಿ 25ರಿಂದ 27 ರವರೆಗೆ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಳುಪೋತ್ಸವ ನಿಮಿತ್ತ 3 ದಿನಗಳ ಕಾಲ ಬಾರಕೂರಿನಲ್ಲಿ ಜಾನಪದ ಜಾತ್ರೆ, ಕೌಶಲ್ಯ ಮೇಳ, ಫಲಪುಷ್ಪ ಪ್ರದರ್ಶನ, ಸಿರಿ ಜಾತ್ರೆ, ಸಾವಯವ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅಳುಪರಿಗೆ ಸಂಬಂಧಿಸಿದಂತೆ ವಿಚಾರಸಂಕಿರಣ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು. ಇದಲ್ಲದೇ, ಖ್ಯಾತ ಚಿತ್ರಕಲಾವಿದರ ನೇತೃತ್ವದಲ್ಲಿ ಬಾರಕೂರಿನ ಇತಿಹಾಸದ ಬಗ್ಗೆ ಚಿತ್ರ ಬಿಡಿಸಲಾಗುವುದು ಎಂದು ಸಚಿವೆ ಜಯಮಾಲಾ ತಿಳಿಸಿದರು.
ಅಳುಪೋತ್ಸವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂಪಾಯಿ ಬಿಡುಗಡೆಯಾಗಲಿದೆ. ಇದರೊಂದಿಗೆ ತೋಟಗಾರಿಕಾ ಇಲಾಖೆಯಿಂದ 25 ಲಕ್ಷ ರೂಪಾಯಿ ಬಿಡುಗಡೆಯಾಗಲಿದೆ. ಈ ಸಂಬಂಧ ಈಗಾಗಲೇ ತಾನು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹಾಗೂ ತೋಟಗಾರಿಕಾ ಸಚಿವ ಮನಗೂಳಿ ಅವರೊಂದಿಗೆ ಮಾತನಾಡಿದ್ದು, ಅನುದಾನ ಬಿಡುಗಡೆಗೆ ಒಪ್ಪಿಕೊಂಡಿದ್ದಾರೆ ಎಂದು ಜಯಮಾಲಾ ತಿಳಿಸಿದರು.