ಕುಂದಾಪುರ,ಡಿ 27 (MSP): ತಾಲೂಕಿನ ಕಂಡ್ಲೂರು, ಕಾವ್ರಾಡಿ, ನೆಲ್ಲಿಕಟ್ಟೆ, ಅಂಪಾರು, ಮೂಡುಬಗೆ, ಬಳ್ಕೂರು, ಸೌಕೂರು, ಮರಾಸಿ, ಗುಲ್ವಾಡಿ, ಹಳನಾಡು ಮೊದಲಾದ ಪ್ರದೇಶಗಳು ಕಳೆದ 25 ವರ್ಷಗಳ ಹಿಂದೆ ಅತ್ಯಂತ ಗ್ರಾಮೀಣ ಪ್ರದೇಶಗಳಾಗಿದ್ದವು. ಈ ಯಾವ ಗ್ರಾಮದಲ್ಲಿಯೂ ಪ್ರೌಢಶಾಲೆಗಳಿರಲಿಲ್ಲ. ಹೈಸ್ಕೂಲ್ ಇಲ್ಲದಿರುವುದರಿಂದ ಬಹುತೇಕ ವಿದ್ಯಾರ್ಥಿಗಳ ಶಿಕ್ಷಣ ಪ್ರಾಥಮಿಕ ಹಂತಕ್ಕೆ ಕೊನೆಗೊಳ್ಳುತ್ತಿತ್ತು. ಅದರಲ್ಲಿ ಹುಡುಗಿಯರದ್ದು ಸಿಂಹಪಾಲು. ಬೆರಳೆಣಿಕೆ ವಿದ್ಯಾರ್ಥಿನಿಯರು ಮಾತ್ರ ದೂರದ ಕುಂದಾಪುರ, ಬಸ್ರೂರುಗಳಿಗೆ ಹೋಗುತ್ತಿದ್ದರು. ಇದನ್ನು ಹತ್ತಿರದಿಂದ ಮನಗಂಡ ಶಿಕ್ಷಣ ಪ್ರೇಮಿಗಳು ಹುಟ್ಟು ಹಾಕಿದ ಶಿಕ್ಷಣ ಸಂಸ್ಥೆಯೇ ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು.
ಕಳೆದ 25 ವರ್ಷಗಳ ಹಿಂದೆ ಹುಟ್ಟಿದ ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮೆರೆದಿದ್ದಾರೆ. ಪ್ರತೀ ಶೈಕ್ಷಣಿಕ ವರ್ಷವೂ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಕಂಡ ಈ ಶಾಲೆಗೂ ಈಗೀಗ ಮಕ್ಕಳ ಕೊರತೆ ಕಾಡುತ್ತಿದೆ. ಬದಲಾವಣೆಗೆ ಹೊಂದಿಕೊಂಡಂತೆ ಈಗ ಆಂಗ್ಲ ಭಾಷಾ ವಿಭಾಗವನ್ನು ತೆರೆಯಲಾಗಿದೆ.
25 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಶಾಲೆಯ ರಜತ ಮಹೋತ್ಸವ ಸಮಾರಂಭ ವೈಭವದಿಂದ ನಡೆಯಿತು. ಅದ್ದೂರಿಯ ಕಾರ್ಯಕ್ರಮಕ್ಕೆ ಸಾವಿರಾರು ಹಳೆ ವಿದ್ಯಾರ್ಥಿಗಳು ಸಾಕ್ಷಿಯಾದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಸಮಾಜದ ಕಟ್ಟ ಕಡೆಯ ಮಗು ವಿದ್ಯಾವಂತನಾದರೆ ಮಾತ್ರ ದೇಶ ಬದಲಾವಣೆಯಾಗುತ್ತದೆ. ಶಿಕ್ಷಣದಲ್ಲಿ ಈ ದೇಶದ ಭವಿಷ್ಯ ನಿಂತಿದೆ. ಯಾವ ಮಗುವೂ ಕೂಡಾ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಹೇಳಿದರು.
ಮಕ್ಕಳು ದೇವರ ಪ್ರತಿರೂಪ, ಮಕ್ಕಳಲ್ಲಿ ದೇವರು ಕಾಣುತ್ತಾನೆ ಮತ್ತು ಮುಗ್ಧತೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಮೇಲೆ ಹೆತ್ತವರ ಜವಾಬ್ದಾರಿ ಅಪಾರವಾಗಿದೆ ಎಂದರು.
ವಿರೋಧ ಪಕ್ಷದ ವಿಪಕ್ಷ ನಾಯಕ ಕೋಟ ಶೀನಿವಾಸ ಪೂಜಾರಿ ಮಾತನಾಡಿ, ಸರಕಾರಿ ಶಾಲೆಯನ್ನು ವ್ಯವಸ್ಥಿತವಾಗಿ ನೆಡೆಸಿಕೊಂಡು ಹೋಗುವುದು ಬಹಳ ಕಠಿಣ ಎಂಬ ಮಟ್ಟಕ್ಕೆ ಬಂದು ಬಿಟ್ಟಿದ್ದೇವೆ. ರಾಜ್ಯದಲ್ಲಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಪದವಿಪೂರ್ವ ಶಾಲೆಗಳು, ಅನುದಾನಿತ ಶಾಲೆಗಳು ಸೇರಿ ಒಟ್ಟು ರಾಜ್ಯದಲ್ಲಿ ಅಂದಾಜು ೫೦ ಸಾವಿರ ಶಾಲೆಗಳು ಕಾರ್ಯನಿರ್ವಹಿಸುತ್ತಿದೆ. ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ಒಂದು ರೀತಿಯ ಆತಂಕ ವ್ಯಕ್ತವಾಗುತ್ತಿದೆ.