ಸುಳ್ಯ, ಏ 11 (DaijiworldNews/HR): ಏಳು ವರ್ಷಗಳ ಹಿಂದೆ ಸಂಪಾಜೆಯ ಕಡೆಪಾಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬಲಿತೆಗೆದುಕೊಂಡ ಟಿಪ್ಪರ್ ಲಾರಿ ಚಾಲಕ ಹಾಗೂ ಮಾಲೀಕ ಇಬ್ಬರಿಗೂ ಎರಡು ವರ್ಷ ಜೈಲು ಶಿಕ್ಷೆ ಹಾಗೂ 3,000 ರೂ. ದಂಡ ವಿಧಿಸಿ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ತೀರ್ಪು ನೀಡಿದ್ದಾರೆ.
ಬೆಳ್ತಂಗಡಿ ನಿವಾಸಿ ಟಿಪ್ಪರ್ ಚಾಲಕ ಇಸ್ಮಾಯಿಲ್ ಎಂಬುವರು 2015ರ ಫೆ.18ರಂದು ಅಡ್ಯಾರ್ ನದಿ ದಡದ ಬಳಿ ಶೇಖರಿಸಿಟ್ಟಿದ್ದ ಮರಳನ್ನು ಮೈಸೂರು-ಮಾಣಿ ಹೆದ್ದಾರಿ ಮೂಲಕ ಮಡಿಕೇರಿಗೆ ಸಾಗಿಸುತ್ತಿದ್ದರು.ವಾಹನ ಮಂಗಳೂರಿನ ಮೊಹಮ್ಮದ್ ರಫೀಕ್ ಎಂಬುವವರದ್ದಾಗಿತ್ತು.
ಅದೇ ವೇಳೆ ಅವಿನಾಶ ಭೀಮಗುಳಿ ಅವರು ತಮ್ಮ ಮಾರುತಿ ಆಲ್ಟೋ ಕಾರಿನಲ್ಲಿ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದಾಗ ಟಿಪ್ಪರ್ ಚಾಲಕ ಇಸ್ಮಾಯಿಲ್ ಟ್ರಕ್ ಅನ್ನು ಅತಿವೇಗದಲ್ಲಿ ಚಲಾಯಿಸಿ ಮಾರುತಿ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವಿನಾಶ ಭೀಮಗುಳಿ ಹಾಗೂ ತಂದೆ ಲಕ್ಷ್ಮೀನಾರಾಯಣ ಭೀಮಗುಳಿ ಅವರು ತಕ್ಷಣ ಸಾವನ್ನಪ್ಪಿದ್ದಾರೆ. ಅವಿನಾಶ್ನ ತಾಯಿ ಚೆನ್ನಮ್ಮ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರೆ, ಅವರ ಮಗ ಅಭಿನಂದನ್ ಅಪಘಾತವಾದ ನಾಲ್ಕು ದಿನಗಳ ನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಕಾರಿನಲ್ಲಿದ್ದ ಭವ್ಯಾ ಅವರ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿತ್ತು.
ಇನ್ನು ಅಪಘಾತದ ಬಳಿಕ ಟಿಪ್ಪರ್ ಚಾಲಕ ಇಸ್ಮಾಯಿಲ್ ಸ್ಥಳದಿಂದ ಪರಾರಿಯಾಗಿದ್ದು, ಸುಳ್ಯ ಠಾಣೆಯ ಅಂದಿನ ಎಸ್ಐ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ವಾದ ಮಂಡಿಸಿದ್ದರು.