ಮಂಗಳೂರು, ಏ 10 (DaijiworldNews/DB): ಶ್ರೀನಿವಾಸ ವಿಶ್ವ ವಿದ್ಯಾಲಯದ ಶ್ರೀನಿವಾಸ ಸಮೂಹ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ ಏಪ್ರಿಲ್ 10ರ ಭಾನುವಾರ ಮುಕ್ಕ ಶ್ರೀನಿವಾಸ ವಿವಿಯ ಕ್ಯಾಂಪಸ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿ. ಪೊನ್ನುರಾಜ್ ಮಾತನಾಡಿ, ಸಾಧನೆಯ ಹಾದಿಯನ್ನು ವಿದ್ಯಾರ್ಥಿಗಳೇ ನಿರ್ಧರಿಸಿ ಅದರ ಸಾಕಾರಕ್ಕೆ ಸರ್ವ ಪ್ರಯತ್ನ ಮಾಡಬೇಕು. ಆಗ ಜೀವನದಲ್ಲಿ ಸಾಫಲ್ಯ ಕಾಣಬಹುದು. ನಿಮ್ಮ ದುಡಿಮೆಯನ್ನು ಪ್ರೀತಿಸಿ, ಹಣ ಕೇವಲ ಸಂಖ್ಯೆ ಮಾತ್ರ. ಯಾವ ಕಾರ್ಯದಿಂದ ನಿಮಗೆ ತೃಪ್ತಿ ದೊರೆಯುತ್ತದೆ ಎಂಬುದರ ಮೇಲೆ ನಿಮ್ಮ ಔನತ್ಯ ನಿರ್ಧರಿತವಾಗಿದೆ ಎಂದು ಹೇಳಿದರು.
ಎ. ಶಾಮ ರಾವ್ ಪ್ರತಿಷ್ಠಾನದ ಅಧ್ಯಕ್ಷ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯೆ ಎಲ್ಲಿರುವುದೋ ವಿನಯವೂ ಅಲ್ಲಿರುತ್ತದೆ. ಶ್ರೀನಿವಾಸ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ಕೌಶಲ ಮತ್ತು ಜ್ಞಾನವನ್ನು ನೀಡಿದೆ. ಈ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕೆನ್ನುವುದು ನಮ್ಮ ಆಶಯ. ವಿದ್ಯೆ ತುಂಬಾ ಶಕ್ತಿಶಾಲಿ. ಆದ್ದರಿಂದ ನೀವು ಕಲಿಯುವ ವಿಷಯವನ್ನು ಮೊದಲು ಪ್ರೀತಿಸಿ, ನಂತರ ನಿಮ್ಮನ್ನು ಸಮರ್ಪಿಸಿಕೊಂಡಾಗ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಗಳಿಸಿದ ಜ್ಞಾನವನ್ನು ಹಂಚಿದಾಗ ಅದು ಹೆಚ್ಚುತ್ತದೆ. ಅದರೊಂದಿಗೆ ವಿನಮ್ರತೆ ಹಾಗೂ ಪ್ರಾಮಾಣಿಕತೆ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀನಿವಾಸ ವಿವಿಯ ವಿಶ್ವಸ್ತ ಮಂಡಳಿಯ ಸದಸ್ಯರಾದ ಪ್ರೊ. ಶ್ರೀಮತಿ ಎ. ಮಿತ್ರಾ ಎಸ್. ರಾವ್ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
1200 ವಿದ್ಯಾರ್ಥಿಗಳಿಗೆ ಪದವಿ ಪ್ರದಾನಿಸಲಾಯಿತು.
ಶ್ರೀನಿವಾಸ ವಿವಿಯ ವಿಶ್ವಸ್ತ ಮಂಡಳಿ ಸದಸ್ಯೆ ಎ. ವಿಜಯಲಕ್ಷ್ಮೀ ಆರ್. ರಾವ್, ವಿವಿ ಉಪಕುಲಪತಿ ಡಾ. ಪಿ. ಎಸ್. ಐತಾಳ್, ಸಹ ಉಪಕುಲಪತಿ ಡಾ. ಜೆ. ಸತ್ಯ ಸಾಯಿ ಕುಮಾರ್, ಶ್ರೀನಿವಾಸ ವಿವಿ ಕುಲಸಚಿವ ಡಾ. ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವ ಡಾ. ಅಜಯ್ ಕುಮಾರ್, ಶೈಕ್ಷಣಿಕ ವಿಭಾಗದ ಕುಲಸಚಿವ ಆದಿತ್ಯಕುಮಾರ್ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ. ರಾಮಕೃಷ್ಣ ಶಬರಾಯ ಅತಿಥಿ ಪರಿಚಯ ಮಾಡಿದರು. ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಶ್ರೀನಿವಾಸ ಮಯ್ಯ ವಂದಿಸಿದರು. ಡಾ. ಅಂಬಿಕಾ ಮಲ್ಯ ಮತ್ತು ಸ್ಟೀವನ್ ರಾಬರ್ಟ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು.