ಬೆಂಗಳೂರು, ಡಿ 27 (MSP): ಶ್ರೀರಾಮ ಚಂದ್ರ ಕುಡುಕ, ಆತ ಸತ್ಯವಂತನಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ಈಚೆಗೆ ಪ್ರಕಟಿಸಿದ ‘ರಾಮ ಮಂದಿರ ಏಕೆ ಬೇಡ?’ ಎಂಬ ಪುಸ್ತಕದಲ್ಲಿ ಬರೆದಿದ್ದು ಮತ್ತೆ ವಿವಾದದ ಕಿಡಿ ಹಚ್ಚಿದ್ದಾರೆ. ರಾಮ ಸತ್ಯವಂತನಲ್ಲ, ವೀರಪುರುಷನೂ ಅಲ್ಲ ಮಾತ್ರವಲ್ಲದೇ ಆತ ರಾಜನಾಗಿ ತನ್ನ ಕರ್ತವ್ಯ ನಿಭಾಯಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅವರು ಇದಕ್ಕೆ ರಾಮಾಯಣದ ಉತ್ತರಕಾಂಡದ 42ನೇ ಸರ್ಗದ ಶ್ಲೋಕಗಳನ್ನು ಇದಕ್ಕೆ ಪೂರಕವಾಗಿ ಉದಾಹರಿಸಿದ್ದಾರೆ. ‘ಸೀತಾಮಾದಾಯ ಹಸ್ತೇನ ಮಧು ಮೈರೇಯಕಂ’ ಎಂಬ ಶ್ಲೋಕವಿದ್ದು, ಇದರ ಅರ್ಥ ‘ಸೀತೆಯ ಜತೆ ಮಧು ಮೈರೇಯಕಂ ಎಂಬ ಮದ್ಯಪಾನ ಮಾಡುತ್ತಿದ್ದನು, ಮಾಂಸಹಾರ ಸೇವಿಸುತ್ತಿದ್ದ. ನೃತ್ಯ ಗೀತೆಗಳಲ್ಲಿ ಪರಿಣತರಾದ ಹುಡುಗಿಯರೂ, ವನಿತೆಯರೂ ಪಾನಮತ್ತರಾಗಿ ರಾಮನ ಎದುರಿಗೆ ನರ್ತಿಸಿದರು. ಧರ್ಮವಂತ ವಿನೋದಪ್ರಿಯ ಪರಮಭೂಷಿತನಾದ ರಾಮ ಆ ಸ್ತ್ರೀಯರನ್ನು ಸಂತೋಷಪಡಿಸಿದನು’ ಎಂದು ಭಗವಾನ್ ಅರ್ಥೈಸಿದ್ದಾರೆ. (ಪುಟ ಸಂಖ್ಯೆ 101) ಹೀಗೆ ಅವರ ಬರೆದ ಪುಸ್ತಕವಿಡೀ ರಾಮನ ವಿರುದ್ದವಾಗಿದೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.