ಕಡಬ, ಏ 10 (DaijiworldNews/DB): ಇಲ್ಲಿನ ಏಕಾಹ ಭಜನಾ ಮಹೋತ್ಸವದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿತರಾಗಿದ್ದ ಪೊಲೀಸರಿಬ್ಬರು ಕುಡಿದ ಮತ್ತಿನಲ್ಲಿ ಪಾನ್ ಬೀಡ ಮಾರಾಟಗಾರನಿಗೆ ಹಲ್ಲೆ ನಡೆಸಿ ಆತನ ಅಂಗಡಿಗೆ ಹಾನಿಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆ ನಡೆಸಿದ ಪೊಲೀಸರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸ್ಐ ಸೀತಾರಾಮ ಗೌಡ ಮತ್ತು ಕಾನ್ಸ್ಸ್ಟೇಬಲ್ ಮೋಹನ್ ಎಂದು ಗುರುತಿಸಲಾಗಿದೆ. ಇಬ್ಬರೂ ಕುಡಿದ ಮತ್ತಿನಲ್ಲಿದ್ದರು ಎಂದು ಸ್ಥಳದಲ್ಲಿದ್ದ ಜನರು ತಿಳಿಸಿದ್ದಾರೆ.
ವೀಳ್ಯದೆಲೆಯ ಗುಣಮಟ್ಟದ ವಿಚಾರವಾಗಿ ಪೊಲೀಸರಿಬ್ಬರು ವ್ಯಾಪಾರಿಯೊಂದಿಗೆ ಜಗಳಕ್ಕಿಳಿದಿದ್ದರು. ಬಳಿಕ ಆತನಿಗೆ ಲಾಟಿಯಿಂದ ಹಲ್ಲೆ ನಡೆಸಿ, ಆತನ ಅಂಗಡಿಗೆ ಹಾನಿ ಮಾಡಿದ್ದಾರೆ. ಈ ವೇಳೆ ಸಾರ್ವಜನಿಕರು ಗುಂಪುಗೂಡಿ ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಸೇರುತ್ತಿದ್ದಂತೆ ಪೊಲೀಸರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಸ್ಥಳೀಯರು ಕಾರನ್ನು ಅಡ್ಡಗಟ್ಟಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಂತೆ ಕೇಳಿಕೊಂಡರೂ ಪೊಲೀಸರು ಒಪ್ಪಲಿಲ್ಲ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಇಬ್ಬರೂ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬೇಕಿತ್ತು.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಸ್ಥಳಕ್ಕಾಗಮಿಸಿ ಘಟನೆಯ ವಿಸ್ತೃತ ವರದಿಯನ್ನು ಮೇಲಧಿಕಾರಿಗಳಿಗೆ ನೀಡುವುದಾಗಿ ಭರವಸೆ ನೀಡಿದರು. ಸಾರ್ವಜನಿಕರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದು, ಬಳಿಕ ಕಡಬ ಎಸ್ಐ ರುಕ್ಮಾ ನಾಯ್ಕ್ ಮತ್ತಿತರರು ಆಸ್ಪತ್ರೆಗೆ ಆಗಮಿಸಿದ್ದಾರೆ. ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಯಿತು.