ಮಂಗಳೂರು, ಏ 10 DaijiworldNews/HR): ಒಂದೇ ಕುಟುಂಬದ ಇಬ್ಬರು ಯುವತಿಯರು ಸುರತ್ಕಲ್ ಎನ್ಐಟಿಕೆ ಬೀಚ್ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಮಂಗಳೂರು ಮೂಲದ ತೃಷಾ(17), ವೈಷ್ಣವಿ(21) ಎಂದು ಗುರುತಿಸಲಾಗಿದ್ದು, ಮೃತ ವೈಷ್ಣವಿ ಅವರ ತಂದೆ ವೆಂಕಟೇಶ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನಿಧನರಾದ ವೆಂಕಟೇಶ್ ಅವರ ಮಾವನ ತಿಥಿಯ ಪಿಂಡ ಪ್ರಧಾನ ಮಾಡಲೆಂದು ಕುಟುಂಬಸ್ಥರು ಎನ್ಐಟಿಕೆ ಬೀಚ್ಗೆ ಬಂದಿದ್ದು, ಪಿಂಡ ಪ್ರಧಾನ ಮಾಡಿದ ಬಳಿಕ ವೆಂಕಟೇಶ್ ಅವರು ನನ್ನ ಮಗಳು ವೈಷ್ಣವಿ ಹಾಗೂ ತಮ್ಮನ ಮಗಳು ತ್ರಿಶಾ ಳೊಂದಿಗೆ ಸಮುದ್ರಕ್ಕಿಳಿದು ಆಟವಾಡುತ್ತಿದ್ದರು ಎನ್ನಲಾಗಿದೆ.
ಇನ್ನು ಸಮುದ್ರಕ್ಕಿಳಿದು ಆಟವಾಡುತ್ತಿದ್ದ ಸಂದರ್ಭ ದೊಡ್ಡ ಅಲೆಯೊಂದರ ಹೊಡೆತಕ್ಕೆ ಸಿಲುಕಿ ವೆಂಕಟೇಶ್, ತ್ರಿಶಾ ಹಾಗೂ ವೈಷ್ಣವಿ ಸಮುದ್ರಪಾಲಾದರು ಎಂದು ತಿಳಿದು ಬಂದಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಸುರತ್ಕಲ್ ಠಾಣೆಯ ಹೊಯ್ಸಳ ವಾಹನದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದಾರಿಮಧ್ಯೆ ತ್ರಿಶಾ ಹಾಗೂ ವೈಷ್ಣವಿ ಕೊನೆಯುಸಿರೆಳೆದಿದ್ದು, ವೆಂಕಟೇಶ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.