ಉಡುಪಿ, ಏ 09 (DaijiworldNews/HR): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೂಚನೆಯಂತೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವು ನಿರಂತರವಾಗಿ ದಿನನಿತ್ಯ ಬಳಕೆಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್, ಹಾಲು ಇವುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಶನಿವಾರದಂದು ಅಜ್ಜರಕಾಡುವಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಮಾತನಾಡಿ, ಪಂಚರಾಜ್ಯಗಳ ಚುನಾವಣೆ ಆಗುವ ತನಕ ಯಾವುದೇ ದರ ಏರಿಕೆ ಆಗಿಲ್ಲ. ಕಳೆದ 15 ದಿನಗಳಲ್ಲಿ 13 ಬಾರಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಒಂದು ಬ್ಯಾರಲ್ ಪೆಟ್ರೋಲ್ ನ ಬೆಲೆ 105 ಡಾಲರ್. ಕೇವಲ ಪೆಟ್ರೋಲ್ ಮಾತ್ರ ಅಲ್ಲ ದಿನಬಳಕೆಯ ವಸ್ತುವಿನ ಮೇಲೂ ಬೆಲೆ ಏರಿಕೆ ಆಗುತ್ತಿದೆ. ಬಡ ಜನರ ಪರವಾಗಿ ನಿಲ್ಲುತ್ತೇವೆ ಎನ್ನುತ್ತಿದ್ದ ಸರಕಾರ ಈಗ ಬೆಲೆ ತುಟ್ಟಿ ಮಾಡಿ, ಧರ್ಮದ ಹೆಸರಿನಲ್ಲಿ ದೇಶದೆಲ್ಲೆಡೆ ಕೋಲಾಹಲ ಎಬ್ಬಿಸಿ ಜನರನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕರಾದ ಮಂಜುನಾಥ ಭಂಡಾರಿಯವರು ಮಾತನಾಡಿ, "ಕಳೆದ 60 ವರ್ಷಗಳಲ್ಲಿ ಎಷ್ಟು ದರ ಜಾಸ್ತಿಯಾಗಿದೆ. 2011 ರಲ್ಲಿ ಒಂದು ಬ್ಯಾರಲ್ ಗೆ 107 ಡಾಲರ್ ಇದ್ದು ಪೆಟ್ರೋಲ್ ರೂ 58 ಮತ್ತು ಡೀಸೆಲ್ ರೂ 37 ಈಗ 108 ರೂ ಡಾಲರ್ ಇದ್ದು ಪೆಟ್ರೋಲ್ ರೂ. 109 ಮತ್ತು ಡೀಸಿಲ್ ಗೆ ರು 93 ತೆರಿಗೆಯನ್ನು ಹೆಚ್ಚು ಪಡಿಸಲಾಗಿದೆ. ಪೆಟ್ರೋಲಿಯಂ ಬೆಲೆ ಅಲ್ಲ. ಇದೇ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಬೆಲೆ ತುಟ್ಟಿ ಆದಾಗ ವಿರೋಧ ಪಕ್ಷದ ನಾಯಕರು ಸೈಕಲ್ ಏರಿ ಪ್ರತಿಭಟನೆ ಮಾಡಿದರು. ಒಂದು ರೂಪಾಯಿ ದರ ಏರಿಕೆ ಪ್ರತಿಯೊಂದರ ಮೇಲೂ ಪ್ರಭಾವ ಬೀರುತ್ತದೆ. ವಿರೋಧ ಪಕ್ಷಗಳು ಬೆಲೆಯೇರಿಕೆಯನ್ನು ಪ್ರಶ್ನಿಸಬಾರದು ಎನ್ನು ವ ಉದ್ದೇಶದಿಂದ ಭಾವನೆಗಳನ್ನು ಭಾವನಾತ್ಮಕ ಬಳಸಿಕೊಳ್ಳುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಿ, ಜನರು ಯೋಚಿಸುವ ದಿಕ್ಕನ್ನೇ ಬದಲಾಯಿಸುತ್ತಿದ್ದಾರೆ ಎಂದು ಹೇಳಿದರು
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬೈಂದೂರು ಮಾಜಿ ಶಾಸಕ ಗೋಪಾಲ್ ಪೂಜಾರಿ, ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯಕುಮಾರ್ ಸೊರಕೆ, ನಾಯಕರುಗಳಾದ ಅಮೃತ್ ಶೈಣೈ, ಪ್ರಖ್ಯಾತ್ ಶೆಟ್ಟಿ, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ, ರೋಶನಿ ಒಲಿವೇರಾ, ಜ್ಯೋತಿ ಹೆಬ್ಬಾರ್, ಸುರಯ್ಯಾ ಅಂಜುಮ್, ಮೊದಲಾದವರು ಉಪಸ್ಥಿತರಿದ್ದರು.