ಉಡುಪಿ, ಏ 09 (DaijiworldNews/HR): ಕಾಪು ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಎಸ್ಡಿಪಿಐ ಬಿಜೆಪಿ ಮೈತ್ರಿ ಮಾಡಿಕೊಂಡು ಒಟ್ಟಿಗೆ ನಾಮಿನೇಷನ್ ಹಾಕಿ ಮತ ಚಲಾಯಿಸುತ್ತಾರೆ. ಅವೆರಡರ ಪ್ರೀತಿಯ ದ್ಯೋತಕವಾಗಿ ಹಿಜಾಬ್ ಹುಟ್ಟಿಕೊಂಡಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಶೋಭಾ ಕರಂದ್ಲಾಜೆಯವರನ್ನು ಟೀಕಿಸಿದರು.
ಈ ಕುರಿತು ಮಾತನಾಡಿದ ಅವರು, ಉಡುಪಿಯಲ್ಲಿ ಸಮಸ್ಯೆ ಆಗುವಾಗ ಸಂಸದೆ ಶೋಭಾ ಕರಂದ್ಲಾಜೆ ನಾಪತ್ತೆಯಾಗುತ್ತಾರೆ. ಈ ಬಾರಿ ಶಿವಮೊಗ್ಗದಲ್ಲಿ ನಡೆದ ಘಟನೆ ಅವರನ್ನ ಜಿಲ್ಲೆಗೆ ಬರ ಮಾಡಿಕೊಂಡಿದೆ. ನಮ್ಮ ಜಿಲ್ಲೆ ಎಡಮೊಗೆಯಲ್ಲಿ ಉದಯ ಗಾಣಿಗ ಕೊಲೆಯಾಯ್ತು. ಬಿಜೆಪಿಯ ಪಂಚಾಯತ್ ಸದಸ್ಯನೇ ಇದರಲ್ಲಿ ಕೊಲೆಗಾರ. ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷ ಎರಡನೇ ಆರೋಪಿ. ಇಷ್ಟಾದರೂ ಶೋಭಕ್ಕ ಜಿಲ್ಲೆಗೆ ಭೇಟಿ ಕೊಟ್ಟಿಲ್ , ಒಬ್ಬ ಶಾಸಕರು ಭೇಟಿ ಕೊಟ್ಟಿಲ್ಲ. ಪ್ರವೀಣ್ ಪೂಜಾರಿ ಹತ್ಯೆಯಾಯ್ತು, ಕೋಟದಲ್ಲಿ ಅವಳಿ ಕೊಲೆಯಾಯ್ತು, ಜಿಲ್ಲಾ ಪಂಚಾಯತ್ ಸದಸ್ಯ ಇದರಲ್ಲಿ ಪ್ರಥಮ ಆರೋಪಿ ಎಂದರು.
ಇನ್ನು ಅವರ ಪಕ್ಷದವರೇ ಕೊಲೆ ಮಾಡಿದಾಗ ಯಾವ ಪರಿಹಾರ ಇಲ್ಲ, ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ, ಆಗ ಯಾವ ಕಾನೂನು ಇಲ್ಲ ಬದಲಾಗಿ ಕೇಸು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಶಿವಮೊಗ್ಗದಂತಹ ಕೊಲೆ ಮತ್ತೆ ಆಗಬಾರದು, ಕಠಿಣವಾದ ಶಿಕ್ಷೆ ಆಗಬೇಕು. ಅವರದೇ ಕ್ಷೇತ್ರದಲ್ಲಿ ತಮ್ಮದೇ ಪಕ್ಷದಲ್ಲಿದ್ದವರ ಕೊಲೆಯ ಬಗ್ಗೆ ಯಾಕೆ ಕಾಳಜಿ ಇಲ್ಲ, ಅವರ ಕುಟುಂಬಕ್ಕೂ ರೂ 25 ಲಕ್ಷ ಪರಿಹಾರ ಕೊಡಲಿ ಎಂದಿದ್ದಾರೆ.
ರಾಜ್ಯದಲ್ಲಿ 13 ಸಲ ಬಜೆಟ್ ಮಂಡನೆ ಮಾಡಿದ್ದಾರೆ, 5 ವರ್ಷಗಳ ಕಾಲ ಯಶಸ್ವಿಯಾಗಿ ಸರಕಾರ ನಡೆಸಿದೆ. ಜಾತ್ಯತೀತ ಶಕ್ತಿಯ ರೀತಿಯಲ್ಲಿ ಬೆಳವಣಿಗೆ ಆಗಿದ್ದಾರೆ. ಸರಕಾರ ಮಾಡುವಂತಹ ತಪ್ಪಿಗೆ ವಿರೋಧ ವ್ಯಕ್ತ ಪಡಿಸದಂತೆ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಸಿಟಿ ರವಿ, ಶೋಭಾ ಕರಂದ್ಲಾಜೆ , ಗೃಹ ಸಚಿವ ಆರಗ ಜ್ಞಾನೇಂದ್ರ ಇವರಿಲ್ಲರಿಗೆ ಏನು ಯೋಗ್ಯತೆ, ಅರ್ಹತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯ ಜನ ಶೋಭಾ ಕರಂದ್ಲಾಜೆಯವರನ್ನ ಮಂಪರು ಪರೀಕ್ಷೆಗೆ ಒಳಪಡಿಸಲಿ, ಅದರ ವರದಿ ತೆಗೆಸಿಕೊಳ್ಳಬೇಕು. ಮುಂದಿನ ಚುನಾವಣೆಗೆ ಬೇಕಾಗುತ್ತದೆ. ಮೆದುಳಿನ ಸ್ಥಿಮಿತ ಕಳೆದುಕೊಂಡ ಹಾಗೆ ಕಾಣುತ್ತಿದೆ. ಅವರು ಈ ರೀತಿಯ ತಾರತಮ್ಯವನ್ನು ಬಿಡಬೇಕು ಎಂದು ಹೇಳಿದ್ದಾರೆ.