ಉಡುಪಿ, ಡಿ 27 (MSP): ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಆದರೆ ಇದು ಸ್ಥಳೀಯರಿಗೆ ಕಿರಿ ಕಿರಿ ಉಂಟುಮಾಡಿದೆ. ಬಿಗಿ ಪೋಲಿಸ್ ಬಂದೋಬಸ್ತ್ ನೆಪದಲ್ಲಿ ಪೊಲೀಸರು ಸಾರ್ವಜನಿಕರ ಮುಂದೆ ಲಾಠಿ ಬೀಸಿ ದರ್ಪ ತೋರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉಡುಪಿಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ನಗರಕ್ಕೆ ಬರುವ ವಾಹನಗಳನ್ನು ತಡೆಯುತ್ತಿರುವ ಪೊಲೀಸರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಉಡುಪಿ ನಗರದಲ್ಲಿರುವ ತಮ್ಮ ಮನೆಗಳಿಗೂ ತೆರಳಲು ಪೊಲೀಸರು ತಕರಾರು ಮಾಡುತ್ತಿರುವುದರಿಂದ ಸ್ಥಳೀಯರ ಹಾಗೂ ಪೊಲೀಸರ ಮದ್ಯೆ ಮಾತಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ. ದಿನಂಪ್ರತಿ ಕಚೇರಿಗೆ ತೆರಳುವ ಉದ್ಯೋಗಿಗಳಿಗೂ ಪೊಲೀಸರು ತಡೆ ಒಡ್ಡುತ್ತಿದ್ದಾರೆ.
ಸಾರ್ವಜನಿಕರಿಗೆ ಪರಿಸ್ಥಿತಿಯ ಬಗ್ಗೆ ತಿಳಿ ಹೇಳುವ ಬದಲು ಪೋಲಿಸರು ಲಾಠಿ ತೋರಿಸಿ ದರ್ಪದ ವರ್ತನೆ ತೋರುತ್ತಿದ್ದು, ಇದರಿಂದ ಪೊಲೀಸರ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರಪತಿಗಳು ಉಡುಪಿಗೆ ಆಗಮಿಸುವುದು 10 ನಿಮಿಷಕ್ಕಾಗಿ . ಆದರೆ ಈ ಅಲ್ಪ ಸಮಯದ ಕಾರ್ಯಕ್ರಮದ ಸಿದ್ದತೆಗೆ ಇಷ್ಟು ಆಡಂಬರ ಬೇಕೆ ಎಂದು ಜನರು ಆಕ್ರೋಶದಿಂದ ಪ್ರಶ್ನಿಸತೊಡಗಿದ್ದಾರೆ.