ಸುಳ್ಯ, ಏ 09 (DaijiworldNews/MS): ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಾನಸಿಕ ಅಸ್ವಸ್ಥೆಯ ಮಾನಭಂಗ ಮಾಡಿ ಜೀವ ಬೆದರಿಕೆ ಒಡ್ಡಿದ ಆರೋಪಿಗೆ ಏಪ್ರಿಲ್ 8 ರಂದು ನ್ಯಾಯಾಲಯವು ಎರಡು ವರ್ಷ ಸಾದಾ ಜೈಲು, 10 ಸಾವಿರ ರೂಗಳ ದಂಡ ವಿಧಿಸಿ ಶಿಕ್ಷೆ ವಿಧಿಸಿದೆ. ಕಳಂಜ ಗ್ರಾಮದ ಕೋಟೆ ಮುಂಡುಗಾರು ನಿವಾಸಿ ಸುಬ್ರಮಣ್ಯ ಶಿಕ್ಷೆಗೊಳಗಾದಾತ.
ಘಟನೆಯ ವಿವರ:
ಸುಳ್ಯ ತಾಲೂಕು ಬಾಳಿಲ ಗ್ರಾಮದ ಕಾಂಚೋಡು ಎಂಬಲ್ಲಿ ಈ ಘಟನೆ ನಡೆದಿದ್ದು, 2015 ಜನವರಿ 11ರಂದು ಮಾನಸಿಕ ಅಸ್ವಸ್ಥರಾಗಿದ್ದ 28 ವರ್ಷದ ಮಹಿಳೆಯೋರ್ವರು ಒಬ್ಬರೇ ಮನೆಯಲ್ಲಿ ಇದ್ದ ಸಂದರ್ಭ ಆರೋಪಿ ಸುಬ್ರಮಣ್ಯ ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆ ಒಳಗೆ ಅಕ್ರಮ ಪ್ರವೇಶ ಮಾಡಿದ್ದ. ಸಂತ್ರಸ್ತೆಯ ತಾಯಿ ಬೀಡಿ ಕೊಡಲು ಪೇಟೆಗೆ ಹೋಗಿದ್ದು, ಈ ವೇಳೆ ಮಹಿಳೆಯ ಆಕೆಯನ್ನು ನೆಲದ ಮೇಲೆ ತಳ್ಳಿ ಮಾನಭಂಗ ಮಾಡಿ . ಯಾರಿಗಾದರೂ ಹೇಳಿದರೆ ಇನ್ನೊಮ್ಮೆ ಬಂದು ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದ.
ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಎ.ಎಸ್.ಐ. ಪುರುಷೋತ್ತಮ ಕೆ. ಪ್ರಕರಣ ದಾಖಲಿಸಿ ಎಸ್.ಐ. ಚಂದ್ರಶೇಖರ್ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ ಎ. ಆರೋಪಿಗೆ ಎರಡು ವರ್ಷ ಸಾದಾ ಜೈಲುಶಿಕ್ಷೆ, 10 ಸಾವಿರ ರೂಗಳ ದಂಡ, ದಂಡ ತೆರಲು ವಿಫಲವಾದಲ್ಲಿ ಒಂದು ತಿಂಗಳ ಸಾದಾ ಜೈಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್ ವಾದಿಸಿದ್ದರು.