ಉಡುಪಿ, ಏ 08 (DaijiworldNews/HR): ಅಲ್ಖೈದಾ ಮುಖ್ಯಸ್ಥನಿಂದ ಪ್ರಶಂಸೆಗೊಳಗಾದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಹಾಗೂ ಯಾವ ಸಂಘಟನೆ ಇದರ ಹಿಂದೆ ಇದೆ ಎಂಬುವುದು ತನಿಖೆ ಆಗಬೇಕು ಎಂದು ಸಚಿವೆ ಶೋಭಾ ಕರಂದ್ಲಾಂಜೆ ಆಗ್ರಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಉಡುಪಿಯಿಂದ ಅರಂಭವಾದ ಹಿಜಾಬ್ ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದೆ. ನಮ್ಮ ದೇಶಕ್ಕಿಂತ ಮೊದಲು ಪಾಕಿಸ್ಥಾನ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಚರ್ಚೆ ಆರಂಭವಾಗಿತ್ತು. ಇದು ಬೇಕಿತ್ತಾ ಬೇಡ್ವಾ ಎಂಬುವುದನ್ನು ಆ ಸಮುದಾಯ ಯೋಚಿಸಬೇಕು. ಇದು ಇವತ್ತು ವ್ಯಾಪಾರಕ್ಕೂ ಕಾಲಿಟ್ಟಿದೆ. ಎಲ್ಲಾ ಧರ್ಮದವರು ಭಾರತದಲ್ಲಿ ಒಟ್ಟಾಗಿರಬೇಕು ಎಂಬುವುದು ನಮ್ಮ ಅಪೇಕ್ಷೆ. ಧರ್ಮವನ್ನು ಮುಂದಿಟ್ಟುಕೊಂಡು ಕಾನೂನನ್ನು ಮುರಿಯುವವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದರು.
ಹಿಜಾಬ್ ಮುಂದುವರೆದ ಭಾಗವಾಗಿ ಹರ್ಷ ಕೊಲೆ ಪ್ರಕರಣ ನಡೆದಿದೆ. ಇದರ ಮುಂದುವರೆದ ಭಾಗವಾಗಿ ಶಿವಮೊಗ್ಗದ ರಸ್ತೆಗಳಲ್ಲಿ ಮಚ್ಚು, ಲಾಂಗ್ ಹಿಡಿದು ಪೋಲಿಸರನ್ನು ಬೆದರಿಸಿದ್ದಾರೆ. ಇದರ ಎಲ್ಲದ ಕುರಿತು ತನಿಖೆ ಆಗುತ್ತೆ. ಅಲ್ಖೈದಾ ಹೇಳಿಕೆ ಕುರಿತಾಗಿ ಕೂಡಾ ತನಿಖೆ ಆಗಬೇಕು ಎಂದಿದ್ದಾರೆ.
ಅಲ್ಖೈದಾ ಹೇಳಿಕೆಗೆ ಆರ್ಎಸ್ಎಸ್ ಕಾರಣ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಓರ್ವ ಜವಾಬ್ದಾರಿಯುತ ಜಾಗದಲ್ಲಿ ಇರುವವರು. ಭಾರತದ ಸಂವಿದಾನದಲ್ಲಿ ಮುಖ್ಯಮಂತ್ರಿಯಷ್ಟೇ ವಿರೋಧ ಪಕ್ಷದ ನಾಯಕರಿಗೂ ಜವಬ್ದಾರಿ ಇದೆ. ಇಂತಹ ವ್ಯಕ್ತಿಯ ಬಾಯಿಯಿಂದ ಜಗತ್ತಿಗೆ ಬೇಕಾದ ಹಿಟ್ ಲಿಸ್ಟ್ ನಲ್ಲಿ ಇರುವಂತಹ ಭಯೋತ್ಪಾದಕ ಕಳಿಸಿರುವ ಸಂದೇಶವನ್ನು ಆರ್ಎಸ್ಎಸ್ ಜೊತೆ ಹೋಲಿಕೆ ಮಾಡುತ್ತಾರೆ. ಕಾಂಗ್ರೆಸ್ ಸಿದ್ದರಾಮಯ್ಯ ನವರನ್ನು ನಿಮ್ಹಾನ್ಸ್ ಗೆ ಕಳಿಸಿದರೆ ಕಾಂಗ್ರೆಸ್ ಉಳಿಯುತ್ತೆ.ಇಲ್ಲದಿದ್ದಲ್ಲಿ ಕಾಂಗ್ರೆಸ್ ನಾಶ ಆಗುತ್ತೆ ಎಂದರು.
ಸುರ್ಜೇವಾಲ ಆತ್ಮಶುದ್ದಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಆತ್ಮಶುದ್ದಿ ಮಾಡಿಕೊಳ್ಳಬೇಕು. ಈಗಾಗಲೇ ಕಾಂಗ್ರೆಸ್ ದೇಶದಲ್ಲಿ ನಾಶ ಆಗಿದೆ. ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಾ ಇದ್ದು, ಅದನ್ನು ಕೂಡಾ ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿಯುತ ಜಾಗದಲ್ಲಿರುವ ಸಿದ್ದರಾಮಯ್ಯ ಕುರಿತು ಕಾಂಗ್ರೆಸ್ ಹೈ ಕಮಾಂಡ್ ಏನು ಹೇಳುತ್ತೆ ಎನ್ನುವುದನ್ನು ಕಾಂಗ್ರೆಸ್ ಸ್ವಷ್ಟಪಡಿಸಲಿ ಎಂದು ಹೇಳಿದ್ದಾರೆ.