ಮಂಗಳೂರು, ಏ 07 (DaijiworldNews/HR): ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗದಂತೆ ಜಿಲ್ಲೆಯ ತಾಲೂಕುಗಳಲ್ಲಿರುವ ಟಾಸ್ಕ್ ಪೋರ್ಸ್ ಸಮಿತಿ ಕಾಲ ಕಾಲಕ್ಕೆ ಸಭೆ ನಡೆಸಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಬೆಸಿಗೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರ ವಹಿಸಬೇಕು, ಅದಕ್ಕಾಗಿ ತಾಲೂಕುಗಳಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ನೀರಿನ ಕೊರತೆ ಇದೂವರೆಗೆ ಕಂಡುಬಂದಿಲ್ಲ. ಮುಂದೆಯೂ ಇಂತಹ ಪ್ರಕರಣಗಳು ಸಂಭವಿಸದಂತೆ ಎಚ್ಚರವಹಿಸಬೇಕು, ಜಾನುವಾರುಗಳು ಮೇವು ಎಂದು ಭಾವಿಸಿ ಪ್ಲಾಸ್ಟಿಕ್ಗಳನ್ನು ತಿನ್ನುವ ಪ್ರಮೇಯ ಉದ್ಭವಿಸಬಹುದು, ಈ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಗಮನ ಹರಿಸಬೇಕು ಎಂದರು.
ಆಸ್ಪತ್ರೆಗಳಲ್ಲಿ ಅವಘಡಗಳು ಸಂಭವಿಸಿದಾಗ ತಕ್ಷಣ ಪ್ರತಿಕ್ರಿಯಿಸಬೇಕು, ಅದಕ್ಕೆ ಪೂರ್ವಭಾವಿಯಾಗಿ ಅಣುಕು ಪ್ರದರ್ಶನಗಳನ್ನು ಮಾಡಬೇಕು, ಕಟ್ಟಡಗಳಲ್ಲಿ ಕೆಲಸ ಮಾಡುವಾಗ ಯಾವೂದೇ ರೀತಿಯ ಅವಘಡಗಳು ಸಂಭವಿಸಿದಂತೆ ಸಂಬಂಧಿಸಿದವರು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಎಂ.ಆರ್.ಪಿ.ಎಲ್ ಹಾಗೂ ಎಂ.ಸಿ.ಎಫ್ ನಂತಹ ಕಾರ್ಖಾನೆಗಳು ಅನಿಲ ಸೋರಿಕೆಯಾಗದಂತೆ ಜಾಗ್ರತೆ ವಹಿಸುವುದರೊಂದಿಗೆ ಅಣಕು ಪ್ರದರ್ಶನವನ್ನು ನಡೆಸಲು ಕ್ರಮ ವಹಿಸಬೇಕು ಎಂದರು.
ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಎಸ್.ಪಿ. ಋಷಿಕೇಶ್ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.