ಉಡುಪಿ, ಡಿ 26 (MSP): ಭಾರತೀಯ ಜನತಾ ಪಕ್ಷವು ಈ ದೇಶದಲ್ಲಿ ಅಸ್ತಿತ್ವಕ್ಕೆ ಬಂದನಂತರ ಎಲ್ಲ ಧರ್ಮದ ಸಂತರನ್ನು ಪ್ರತಿನಿಧಿಗಳನ್ನು ಅತ್ಯಂತ ಪೂಜನೀಯವಾಗಿ ಕಾಣುತಿದ್ದು ಅವರ ಧಾರ್ಮಿಕ ಚಿಂತನೆಗಳಿಗೆ ಭಾವನೆಗಳಿಗೆ ಗೌರವವನ್ನು ನೀಡುತ್ತಾ ಬಂದಿದೆ ಮತ್ತು ಇತರ ಪಕ್ಷಗಳಂತೆ ಅವರನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಲ್ಲ ಎಂದು ಶಾಸಕ ಕೆ ರಘುಪತಿ ಭಟ್ ಅವರು ಹೇಳಿದರು.
ಅವರು ಬುಧವಾರ ಉಡುಪಿ ಶಾಸಕರ ಕಚೇರಿಯಲ್ಲಿ ಉಡುಪಿ ನಗರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಯೋಜಿಸಿದ ಕ್ರಿಸ್ಮಸ್ ಆಚರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ನಂತರ ಪ್ರತಿಯೊಬ್ಬ ಭಾರತೀಯನೂ ಸರ್ವ ಧರ್ಮ ಸಮನ್ವಯತೆಯ ಮತ್ತು ಭಾವೈಕ್ಯತೆಯ ಸಂವೇದನೆಯನ್ನು ತೃಪ್ತಿಕರವಾಗಿ ಅನುಭವಿಸುತ್ತಿದ್ದಾನೆ, ಇದು ದೇಶ ಸುಭಿಕ್ಷವಾಗುವ ಸಂಕೇತ ಎಂದು ಅವರು ಅಭಿಪ್ರಾಯ ಪಟ್ಟರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲ ಧಾರ್ಮಿಕ ಆಚರಣೆಗಳನ್ನು ಸರ್ವಧರ್ಮೀಯರು ಒಟ್ಟಾಗಿ ಆಚರಿಸಿದಾಗ ಮಾತ್ರ ಐಕ್ಯತೆಯ ಕಲ್ಪನೆ ಸಾಕಾರ ಗೊಳ್ಳಬಹುದು ಎಂದು ಹೇಳಿದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಟ್ರಿನ್ ನ ಧರ್ಮಗುರುಗಳಾದ ರೆವೆರೆಂಡ್ ಫಾದರ್ ಕೆನೆತ್ ನೊರೊನ್ನಾ ಕ್ರಿಸ್ಮಸ್ ಸಂದೇಶವನ್ನು ನೀಡಿ ಪ್ರಪ್ರಥಮ ಬಾರಿಗೆ ಶಾಸಕರ ಕಚೇರಿಯಲ್ಲಿ ಇಂತಹ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದುದು ಹೊಸ ಅನುಭವ ಎಂದ ಅವರು ಎಲ್ಲ ಧರ್ಮಗಳ ದೇವರುಗಳ ಒಂದೇ ಸಂದೇಶವಾದ ಭಾವೈಕ್ಯತೆಯ ಸಾರವನ್ನು ಜೊತೆಯಾಗಿ ಸಾರೋಣ ಎಂದು ಹೇಳಿದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ರಾಜೇಂದ್ರ ಪಂದುಬೆಟ್ಟು, ನಗರ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ದಾವೂದ್ ಅಬು ಬಕರ್, ನಗರಸಭಾ ಸದಸ್ಯರಾದ ಶ್ರೀಶ ಕೊಡವೂರು, ಹರೀಶ್ ಶೆಟ್ಟಿ, ಗಿರೀಶ್ ಅಂಚನ್, ಗಿರಿಧರ ಆಚಾರ್ಯ, ಸಂತೋಷ್ ಕುಮಾರ್, ಕಾರ್ಯಕರ್ತರಾದ ಕಿಶೋರ್ ಕರಂಬಳ್ಳಿ, ದಿನೇಶ್ ಕುಮಾರ್, ವಿಜಯ್ ಪೂಜಾರಿ, ಸುರೇಶ ಹೆಂಗವಳ್ಳಿ, ಚಂದ್ರಕಾಂತ್ ಶೆಟ್ಟಿ, ವಿಲ್ಸನ್, ಸ್ನೇಹ ಸಂಗಮ ಈಶ್ವರ ನಗರ ಇದರ ಅಧ್ಯಕ್ಷರಾದ ಹರೀಶ್ ಜಿ ಕಲ್ಮಾಡಿ ಮತ್ತಿತರರು ಉಪಸ್ಥಿತರಿದ್ದರು. ಮೋರ್ಚಾದ ಉಪಾಧ್ಯಕ್ಷ ಅಲ್ವಿನ್ ಡಿಸೋಜ ಸ್ವಾಗತಿಸಿದರು. ನಗರ ಅಧ್ಯಕ್ಷ ಪ್ರಭಾಕರ್ ಪೂಜಾರಿ ವಂದಿಸಿದರು. ಮಂಜುನಾಥ್ ಮಣಿಪಾಲ ನಿರೂಪಣೆ ಮಾಡಿದರು