ಮಂಗಳೂರು, ಏ 07 (DaijiworldNews/MS): ನೈಜ ಬದುಕಿನ ಅನುಭವಗಳನ್ನು ಮನಮುಟ್ಟುವಂತೆ ಚಿತ್ರಿಸಿ ರಚಿತವಾದ ನಾಟಕಗಳು ಸಮಾಜದ ಮೇಲೆ ಶಾಶ್ವತ ಪ್ರಭಾವ ಬೀರುತ್ತವೆ ಎಂದು ನಟ, ನಿರ್ದೇಶಕ, ನಾಟಕಕಾರ ಕೆ.ರಾಧಾಕೃಷ್ಣ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ಅಮೃತ ರಂಗ ಮಹೋತ್ಸವದ ಅಂಗವಾಗಿ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಮಾ.22, 23ರಂದು ನಡೆದ ಎರಡು ದಿನಗಳ ನಾಟಕೋತ್ಸವ ಮತ್ತು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ರಂಗ ನಿರ್ದೇಶಕ, ಬಹುಮುಖ ಪ್ರತಿಭೆ, ದಿ.ಭಾಸ್ಕರ ನೆಲ್ಲಿತೀರ್ಥ ಅವರ ನೆನಪಿನಲ್ಲಿ ನೀಡುವ 2022 ನೇ ಸಾಲಿನ ‘ರಂಗ ಭಾಸ್ಕರ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
"ಬದಲಾದ ಕಾಲಕ್ಕೆ ತಕ್ಕಂತೆ ನಾಟಕಗಳಲ್ಲಿ ಬದಲಾವಣೆಗಳು ಆಗುತ್ತಿದ್ದು, ರಂಗಭೂಮಿಯಲ್ಲಿ ಉನ್ನತ ಸಾಧನೆಗೈದ ದಿಗ್ಗಜರನ್ನು ಗುರುತಿಸಲು ಸನ್ಮಾನಿಸುವಂತೆಯೇ ಮಕ್ಕಳಲ್ಲಿ ನಾಟಕಗಳ ಬಗ್ಗೆ ಪ್ರಜ್ಞೆ ಮೂಡಿಸುವ ಹೊಸ ಕಾರ್ಯಕ್ಕೆ ನಗರದಲ್ಲಿ ಚಾಲನೆ ನೀಡಲಾಗುತ್ತಿದೆ. ಪಠ್ಯಕ್ರಮದ ಜೊತೆಗೆ ರಂಗಭೂಮಿ ಚಟುವಟಿಕೆಗಳನ್ನು ಸೇರಿಸುವ ಯೋಜನೆ ಇದೆ.ಜನರು ಈ ಯೋಜನೆಗೆ ಹೃದಯಪೂರ್ವಕವಾಗಿ ಬೆಂಬಲ ನೀಡಬೇಕು" ಎಂದರು.
ಬಹುಮುಖ ಪ್ರತಿಭೆ ಹಾಗೂ ‘ರಂಗಸಂಗತಿ’ ಸಂಸ್ಥಾಪಕ ದಿವಂಗತ ಭಾಸ್ಕರ್ ನೆಲ್ಲಿತೀರ್ಥ ಅವರ ಸ್ಮರಣಾರ್ಥ ನೀಡಲಾಗುತ್ತಿರುವ ‘ರಂಗಭಾಸ್ಕರ’ ಪ್ರಶಸ್ತಿಯನ್ನು ನಟ, ನಿರ್ದೇಶಕ ಹಾಗೂ ನಾಟಕಕಾರ ಕೆ ರಾಧಾಕೃಷ್ಣ ಅವರಿಗೆ ಇದೇ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ "ದಾಟ್ಸ್ ಆಲ್ ಯುವರ್ ಆನರ್" ಎಂಬ ಕನ್ನಡ ನಾಟಕವನ್ನು ಪ್ರದರ್ಶನಗೊಂಡಿತು.
ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ನಿವೃತ್ತ ಅಧಿಕಾರಿ ಪಿ ಮನೋಹರ್, ವಕೀಲರ ಸಂಘದ ಮಂಗಳೂರು ಅಧ್ಯಕ್ಷ ಎನ್.ನರಸಿಂಹ ಹೆಗ್ಡೆ, ರಂಗಮನೆ ಸುಳ್ಯದ ನಿರ್ದೇಶಕ ಜೀವನ್ ರಾಮ್ ಸುಳ್ಯ, ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಹಿರಿಯ ನಿರ್ದೇಶಕ ರಿಚರ್ಡ್ ಕ್ಯಾಸ್ಟೆಲಿನೋ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಡುಪಿ ದ.ಕ ಜಿಲ್ಲಾ ಸದಸ್ಯ ಸಂಚಾಲಕ ಎಂ ಕೆ ಮಠ, ರಂಗಸಂಗತಿ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಶಶಿರಾಜ್ ರಾವ್ ಕಾವೂರು, ಲಕ್ಷ್ಮಣ್ ಕುಮಾರ್ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.
ಕುದ್ರೋಳಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.