ಉಡುಪಿ, ಏ 07 (DaijiworldNews/MS): ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರೊಫೆಸರ್, ಹಿರಿಯ ಸಸ್ಯವಿಜ್ಞಾನಿ ಡಾ.ಕೆ ಗೋಪಾಲಕೃಷ್ಣ ಭಟ್ (75 ) ಎಪ್ರಿಲ್ 07 ರ ಮುಂಜಾನೆ ತಮ್ಮ ಚಿಟ್ಪಾಡಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲು ಕಾಕುಂಜೆಯವರಾದ ಮೃತರು 33 ವರ್ಷಗಳ ಕಾಲ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಫ್ಲೋರಾ ಆಫ್ ಉಡುಪಿ, ಫ್ರೋರಾ ಆಫ್ ದಕ್ಷಿಣ ಕನ್ನಡ ಎಂಬ ಬೃಹತ್ ಸಸ್ಯಶಾಸ್ತ್ರೀಯ ನಿಘಂಟು ಸಂಶೋಧನಾ ಗ್ರಂಥಗಳನ್ನು ರಚಿಸಿ ಎರಡು ಜಿಲ್ಲೆಗಳಲ್ಲಿರುವ ಸಮಗ್ರ ಸಸ್ಯಪ್ರಬೇಧಗಳ ಬಗ್ಗೆ ಅಮೂಲ್ಯ ಮಾಹಿತಿ ನೀಡಿದ್ದರು. ಅವರು ಉಡುಪಿಯಲ್ಲಿ ಕಂಡು ಹಿಡಿದ ಅಪೂರ್ವ ಸಸ್ಯಪ್ರಭೇದವೊಂದಕ್ಕೆ ಲಂಡನ್ ನ ಪ್ರತಿಷ್ಠಿತ ಬಯೋಲಜಿಕಲ್ ಸೊಸೈಟಿಯು ಅವರ ಹೆಸರನ್ನೇ ಇಟ್ಟು ಗೌರವಿಸಿದ್ದು ಡಾ.ಕೆ. ಗೋಪಾಲಕೃಷ್ಣ ಭಟ್ಟರ ಅನನ್ಯ ಸಾಧನೆಗೆ ಸಾಕ್ಷಿ.
ಸಸ್ಯಗಳ ವೈಜ್ಞಾನಿಕ ವರ್ಗೀಕರಣದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಡಾ.ಕೆ.ಜಿ.ಭಟ್ಟರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.
ಮೂಲತಃ ಕಾಸರಗೋಡಿನ ಕಾಕುಜೆಯವರಾಗಿದ್ದರೂ ಜೀವನದ ಹೆಚ್ಚಿನ ಅವಧಿಯನ್ನು ಉಡುಪಿಯಲ್ಲೇ ಕಳೆದಿದ್ದರು.
ಈಚೆಗೆ ಪ್ರೊ. ಅರವಿಂದ ಹೆಬ್ಬಾರ್ ರಚಿಸಿದ 'ಟ್ಯಾಕ್ಸೋನೊಮಿ ಭಟ್ಟರ ಯಾನ' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗಿತ್ತು.
ಕೆ.ಜಿ.ಭಟ್ಟರ ನಿಧನಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.