ಉಡುಪಿ,ಡಿ 26 (MSP): ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮಾಡಿದ ಮನವಿ ಮೇರೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಡಿ 26 ರಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅವರನ್ನು ಭೇಟಿಯಾಗಿ ತನ್ನ ಅಧಿಕಾರಾವಧಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದವರಿಗೆ ಪಾರದರ್ಶಕವಾಗಿ ನೀಡಲಾಗಿರುವ ಎಲ್ಲಾ ಪರವಾನಿಗೆದಾರರ ಪರವಾನಿಗೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಹೊಸ ಪರವಾನಿಗೆ ಮಂಜೂರು ಮಾಡುವಾಗ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುವ ದಲಿತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರು.
ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯ ಜನರ ಹಿತದೃಷ್ಟಿಯಿಂದ "ಉಡುಪಿ ಜಿಲ್ಲೆಯ ಮರಳು ಉಡುಪಿ ಜಿಲ್ಲೆಗೆ" ಎಂದು ಹೊರಡಿಸಿರುವ ಆದೇಶವನ್ನು ಮುಂದುವರಿಸಿ ಉಡುಪಿ ಜಿಲ್ಲೆಯ ಜನರಿಗೆ ಕಡಿಮೆ ದರಕ್ಕೆ ಮರಳು ಸಿಗುವಂತೆ ಮಾಡಬೇಕು, ಮರಳು ಸಮಸ್ಯೆಯ ಗೊಂದಲಗಳು ಮತ್ತು ಸಿ.ಆರ್.ಝಡ್ ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಗಣಿ ಸಚಿವರಾದ ಶ್ರೀ ರಾಜಶೇಖರ ಪಾಟೀಲ್ ರವರನ್ನು ಭೇಟಿಯಾಗಿ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವ ಬಗ್ಗೆ ಮತ್ತೊಮ್ಮೆ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಹಾಗು ದಲಿತ ಮುಖಂಡರುಗಳು ಉಪಸ್ಥಿತರಿದ್ದರು.