ಬೆಳ್ತಂಗಡಿ, ಏ. 06 (DaijiworldNews/SM): ಅರಣ್ಯಾಧಿಕಾರಿ ಕಿರುಕುಳದಿಂದ ಕೃಷಿಕ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಅರಣ್ಯಾಧಿಕಾರಿ ಸಂಧ್ಯಾ ಕಿರುಕುಳದಿಂದ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಕೃಷಿಕ ರಾಮ ನಾಯ್ಕ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾಮ ನಾಯ್ಕ ಎರಡು ಎಕರೆ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದರು. ಅವರದ್ದೇ ಜಾಗದ ಮರ ಕಡಿದು ಕೃಷಿಗೆ ಜಾಗ ಬಳಸಿಕೊಂಡಿದ್ದರು. ಮರ ಕಡಿದ ಹಿನ್ನೆಲೆ ಜ.4ರಂದು ಮನೆಗೆ ದಾಳಿ ನಡೆಸಿ ಮನೆಯಲ್ಲಿ ದಾಸ್ತಾನಿದ್ದ ಮರವನ್ನು ವಶಕ್ಕೆ ಪಡೆದುಕೊಂಡಿದ್ದರು.
ನಿರಂತರ ಬೆದರಿಕೆ ಹಾಕಿದ್ದಲ್ಲದೇ ಪ್ರಕರಣ ಮುಗಿಸಲು 10 ಲಕ್ಷಕ್ಕೆ ಬೇಡಿಕೆ ಆರೋಪ ಮಾಡಲಾಗಿತ್ತು. ನೋವಿನಿಂದ ಕಳೆದ ಎರಡು ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದ ರಾಮ ನಾಯ್ಕ ತೀವ್ರ ಅಸ್ವಸ್ಥಗೊಂಡು ಹೃದಯಾಘಾತದಿಂದ ಮೃತಪಟ್ಟಿದ್ದರು. ರಾಮ ನಾಯ್ಕ ಸಾವಿಗೆ ಅರಣ್ಯ ಸಂಚಾರಿ ದಳದ ಸಂಧ್ಯಾ ಕಾರಣ ಎಂದು ಆರೋಪಿಸಿ ಪ್ರತಿಭಟನೆ ಕುಟುಂಬಿಕರು, ಮಕ್ಕಳು ಮತ್ತು ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ.