ಸುಳ್ಯ, ಏ 06 (DaijiworldNews/DB): ಸಂಪಾಜೆಯ ಅಂಬರೀಶ್ ಭಟ್ ಅವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇನ್ನಿಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಒಟ್ಟು ಬಂಧಿತರ ಸಂಖ್ಯೆ ಆರಕ್ಕೇರಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಸೆಂಥಿಲ್ ಮತ್ತು ಪಾಂಡಿಸೆಲ್ವಂ ಬಂಧಿತ ಆರೋಪಿಗಳು. ಇಬ್ಬರನ್ನೂ ಏಪ್ರಿಲ್ 1ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸೆಂಥಿಲ್ ನನ್ನು ಪೊಲೀಸ್ ಭದ್ರತೆಗೆ ಪಡೆದುಕೊಂಡು ತನಿಖೆ ಮುಂದುವರಿಸಿ ಆರೋಪಿ ತೋರಿಸಿಕೊಟ್ಟಂತೆ ಒಟ್ಟು 71.52 ಗ್ರಾಂ ಚಿನ್ನಾಭರಣಗಳು, 11590 ರೂ. ನಗದು ಮತ್ತು ಕೃತ್ಯಕ್ಕೆ ಉಪಯೋಗಿಸಿದ KA 03 AB 1883 ಮತ್ತು TN 73F 8445 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಳ್ಯ ತಾಲೂಕು ಸಂಪಾಜೆಯ ಚಟ್ಟೆಕಲ್ಲು ಎಂಬಲ್ಲಿರುವ ಅಂಬರೀಶ್ ಅವರ ಮನೆಗೆ ದುಷ್ಕರ್ಮಿಗಳು ಮಾರ್ಚ್ 20ರಂದು ನುಗ್ಗಿ ಮನೆಯಲ್ಲಿದ್ದ ಸುಮಾರು 1,52,000 ರೂ. ನಗದು, 83 ಗ್ರಾಂ ಚಿನ್ನವನ್ನು ದರೋಡೆಗೈದಿದ್ದರು. ಈ ಸಂಬಂಧ ಆಶಾ ಎಂಬವರು ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಅವರ ಸೂಚನೆಯಂತೆ ಪೊಲೀಸ್ ಉಪಾಧೀಕ್ಷಕಿ ಗಾನಾ ಪಿ.ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು. ಅದರಂತೆ ಆರೋಪಿಗಳಾದ ಕಾರ್ತಿಕ್, ಯದುಕುಮಾರ್, ದೀಕ್ಷಿತ್ ಕೆ.ಎನ್., ನರಸಿಂಹನ್ ಅವರನ್ನು ದಸ್ತಗಿರಿ ಮಾಡಿ, ದರೋಡೆ ಮಾಡಿದ ಹಣದ ಪೈಕಿ 20 ಸಾವಿರ ರೂ. ನಗದು, ಆರೋಪಿಗಳು ಕೃತ್ಯದ ಸಮಯದಲ್ಲಿ ಬಳಸಿದ ವಾಹನ, 5 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.ಇದೀಗ ಈ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ಬಂಧನಕ್ಕೊಳಪಡುವ ಮೂಲಕ ಬಂಧಿತರ ಸಂಖ್ಯೆ ಆರಕ್ಕೇರಿದೆ. ತನಿಖೆ ಮುಂದುವರಿದಿದ್ದು ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.