ಮಂಗಳೂರು, ಏ 06 (DaijiworldNews/DB): ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2023ರ ಅಂತ್ಯದೊಳಗೆ ಪ್ರತೀ ಮನೆಗಳಿಗೆ ನಳ ನೀರು ಸಂಪರ್ಕವನ್ನು ಒದಗಿಸುವುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಏ. 6ರ ಬುಧವಾರ
ನಡೆದ ಜಿಲ್ಲೆಯ ಎಲ್ಲಾ ಇಂಜಿನಿಯರ್ಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ ಹಾಗೂ ಒಂದು ದಿನದ ಕ್ಷೇತ್ರ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವ್ಯಕ್ತಿಗೆ ಜೀವಿಸುವ ಹಕ್ಕು ಹೇಗೆ ಇದೆಯೋ ಅದೇ ರೀತಿ ಶುದ್ಧ ಕುಡಿಯುವ ನೀರನ್ನು ಪಡೆಯುವ ಹಕ್ಕು ಇದೆ. ನೀರು ಜೀವನದ ಅವಿಭಾಜ್ಯ ಅಂಗ. ಜಲ, ಜೀವ ಮತ್ತು ಜೀವನ ಈ ಮೂರು ಅಂಶಗಳು ಒಂದಕ್ಕೊಂದು ಪೂರಕ. ಜಲ ಸಂರಕ್ಷಣೆ, ನೀರಿನ ಮಿತಬಳಕೆ ಹಾಗೂ ಶುದ್ಧ ಕುಡಿಯುವ ನೀರಿನ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ ಮತ್ತು ಮುಂದಿನ ಪೀಳಿಗೆಗಳಿಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.
ಜಲ ಸಾಕ್ಷರತೆ ಎಂಬುವುದು ಪ್ರತಿಯೊಬ್ಬ ವ್ಯಕ್ತಿಗೂ ತಲುಪುವುದು ಅವಶ್ಯಕವಾಗಿರುತ್ತದೆ. ಅದ್ದರಿಂದ ಶುದ್ಧ ಕುಡಿಯುವ ನೀರಿನ ಪ್ರಾಮುಖ್ಯತೆಯನ್ನು ತಿಳಿಸುವುದರ ಜೊತೆಗೆ ಜಲಜೀವನ್ ಮಿಷನ್ ಯೋಜನೆಯ ಮಹತ್ವವನ್ನು ಅರಿತು ಸಮಪರ್ಕವಾಗಿ ಅನುಷ್ಟಾನಗೊಳಿಸುವ ಹೊಣೆಗಾರಿಕೆ ನಮ್ಮದಾಗಿರುತ್ತದೆ ಎಂದರು.
ಸರ್ಕಾರದ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಯೋಜಿಸಲಾಗುತ್ತಿರುತ್ತದೆ. ಈ ಎಲ್ಲಾ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸಂಬಂಧಪಟ್ಟ ಇಲಾಖಾ ಅನುಷ್ಟಾನ ಅಧಿಕಾರಿಗಳ ಪಾತ್ರವು ಬಹಳ ಮುಖ್ಯವಾಗಿರುತ್ತದೆ. ಅದರಂತೆ ಜಲಜೀವನ್ ಮಿಷನ್ ಯೋಜನೆಯು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಯೋಜಿಸಲಾಗಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿರುವ ಇಂಜಿನಿಯರ್ ಗಳು ಪರಿಮಾಣಕಾರಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಮಾತ್ರ ಜಲಜೀವನ್ ಮಿಷನ್ ಯೋಜನೆಯನ್ನು ಮಿಷನ್ ಪೂರ್ಣಗೊಳಿಸಬಹುದಾಗಿರುತ್ತದೆ. ತರಬೇತಿಯನ್ನು ಪೂರ್ಣಪ್ರಮಾಣದಲ್ಲಿ ಗ್ರಹಿಸಿ ಯೋಜನೆಯ ಅನುಷ್ಟಾನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಒಟ್ಟು 3 ಹಂತಗಳಲ್ಲಿ 700 ಕಾಮಗಾರಿಗಳನ್ನು 516 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಯನ್ನು ಕೈಗೊಳ್ಳಲಾಗಿದ್ದು, 1ನೇ ಹಂತದಲ್ಲಿ ಒಟ್ಟು 468 ಕಾಮಗಾರಿಗಳನ್ನು 179 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಯನ್ನು ಹಮ್ಮಿಕೊಂಡಿದ್ದು, ಈವರೆಗೆ 239 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ, ಸುಮಾರು 29,000 ವೈಯುಕ್ತಿಕ ನಳ ನೀರು ಸಂಪರ್ಕಕ್ಕೆ ಫಲಾನುಭವಿಗಳನ್ನು ಗುರುತಿಸಲಾಗಿ ಐಎಂಐಎಸ್ ತಂತ್ರಾಂಶದಲ್ಲಿ ಇಂದೀಕರಿಸಲಾಗಿರುತ್ತದೆ. 2ನೇ ಹಂತದಲ್ಲಿ ಒಟ್ಟು 124 ಕಾಮಗಾರಿಗಳನ್ನು 210 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜಿಸಲಾಗಿದ್ದು, ಪ್ರಸ್ತುತ ಟೆಂಡರ್, ಕಾರ್ಯಾದೇಶ ಹಾಗೂ ಕಾಮಗಾರಿ ಪ್ರಾರಂಭ ಹಂತದಲ್ಲಿರುತ್ತದೆ. 3ನೇ ಹಂತದಲ್ಲಿ ಒಟ್ಟು 108 ಕಾಮಗಾರಿಗಳನ್ನು 127 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜಿಸಲಾಗಿದ್ದು, ಡಿಪಿಆರ್ ತಯಾರಿಕ ಹಂತದಲ್ಲಿರುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಸ್ಥಿರ ಜಲಮೂಲವನ್ನು ಆಧಾರಿಸಿ ಒಟ್ಟು 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 487 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜಿಸಲಾಗಿದ್ದು, 2 ಕಾಮಗಾರಿಗಳು ಟೆಂಡರ್ ಅನುಮೋದನೆ ಹಂತದಲ್ಲಿರುತ್ತದೆ. ಉಳಿದ 5 ಕಾಮಗಾರಿಗಳ ಪ್ರಾಥಮಿಕ ಯೋಜನಾ ವರದಿಯು ತಯಾರಿಕೆಯಲ್ಲಿರುತ್ತದೆ.
ಈ ಎಲ್ಲಾ ಯೋಜನೆಗಳನ್ನು 2023ರ ಅಂತ್ಯದೊಳಗೆ ಪೂರ್ಣಗೊಳಿಸಿ ಜಿಲ್ಲೆಯ ಎಲ್ಲಾ ಕುಟುಂಬಗಳಿಗೆ ವೈಯುಕ್ತಿಕ ನಳ ನೀರು ಸಂಪರ್ಕವನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಮೈಸೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಕೆ.ಎನ್. ಕೃಷ್ಣಮೂರ್ತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಕೇಂದ್ರ ಕಚೇರಿಯ ಅಧೀಕ್ಷಕ ಎಂಜಿನಿಯರ್ ನರಸಿಂಹರಾಜು, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್ ಮಸಗುಪ್ಪಿ ಹಾಗೂ ಎಂ.ಆರ್. ರಾಮಚಂದ್ರಯ್ಯ ಉಪಸ್ಥಿತರಿದ್ದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮಂಗಳೂರಿನ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ನರೇಂದ್ರ ಬಾಬು ಸ್ವಾಗತಿಸಿದರು.